
ಮುಂಬಯಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಸೆಮಿಫೈನಲ್ ಹಂತವನ್ನು ತಲುಪುವಲ್ಲಿ ಭರ್ಜರಿ ಸಾಧನೆ ದಾಖಲಿಸಿದೆ. ಗುರುವಾರ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಳೆಯಿಂದ ಬಾಧಿತ ಪಂದ್ಯದಲ್ಲಿ, ಭಾರತವು ಡಿಎಲ್‌ಎಸ್ ನಿಯಮದಡಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 53 ರನ್‌ಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 49 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 340 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಆರಂಭಿಕ ಬ್ಯಾಟರ್‌ಗಳು ಸ್ಮೃತಿ ಮಂಧಾನ (109; 95 ಎಸೆತ, 10 ಬೌಂಡರಿ, 4 ಸಿಕ್ಸರ್) ಮತ್ತು ಪ್ರತೀಕಾ ರಾವಲ್ (122; 134 ಎಸೆತ, 13 ಬೌಂಡರಿ, 2 ಸಿಕ್ಸರ್) ಅದ್ಭುತ ಶತಕಗಳೊಂದಿಗೆ ಭಾರತಕ್ಕೆ ಬಲಿಷ್ಠ ಅಡಿಪಾಯ ನೀಡಿದರು. ಇಬ್ಬರು ಸೇರಿ 212 ರನ್‌ಗಳ ಪ್ರಥಮ ವಿಕೆಟ್ ಜೋಡಿ ಹಂಚಿಕೊಂಡು ತಂಡವನ್ನು ಭದ್ರ ಸ್ಥಿತಿಗೆ ತಲುಪಿಸಿದರು.
ನಂತರ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್ ಮೂಲಕ ಮೊತ್ತವನ್ನು ಹೆಚ್ಚಿಸಿದರು.
ನ್ಯೂಜಿಲೆಂಡ್ ತಂಡಕ್ಕೆ ಮಳೆಯಿಂದಾಗಿ ಪರಿಷ್ಕೃತ ಗುರಿಯಾಗಿ 44 ಓವರ್‌ಗಳಲ್ಲಿ 325 ರನ್ ನೀಡಲಾಯಿತು. ಆದರೆ ಅವರು 271 ರನ್‌ಗಳಿಗೆ ಸಿಮಿತವಾದರು. ಬ್ರೂಕ್ ಹ್ಯಾಲಿಡೇ (81) ಮತ್ತು ಇಸಾಬೆಲ್ ಗೇಜ್ (ಅಜೇಯ 65) ಶ್ರೇಷ್ಠ ಪ್ರಯತ್ನ ಮಾಡಿದರೂ, ಭಾರತೀಯ ಬೌಲರ್‌ಗಳ ನಿಖರ ಎಸೆತದ ಮುಂದೆ ತಡೆಯಲು ಸಾಧ್ಯವಾಗಲಿಲ್ಲ.
ಭಾರತದ ಪರ ರೇಣುಕಾ ಸಿಂಗ್ ಮತ್ತು ಕ್ರಾಂತಿ ಗೌರ್ ತಲಾ ಎರಡು ವಿಕೆಟ್ ಪಡೆದರೆ, ಸ್ನೇಹ್ ರಾಣಾ, ಶ್ರೀ ಚರಣಿ, ದೀಪ್ತಿ ಶರ್ಮಾ ಹಾಗೂ ಪ್ರತೀಕಾ ರಾವಲ್ ತಲಾ ಒಂದು ವಿಕೆಟ್ ಪಡೆದು ಉತ್ತಮ ಕೊಡುಗೆ ನೀಡಿದರು.
ಈ ಗೆಲುವಿನೊಂದಿಗೆ ಭಾರತ ವಿಶ್ವಕಪ್ ಸೆಮಿಫೈನಲ್‌ಗೆ ಮುನ್ನಡೆದಿದ್ದು, ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಅವರ ಸ್ಫೋಟಕ ಇನ್ನಿಂಗ್ಸ್ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡದ ಈ ಗೆಲುವು, ಭಾರತ ಮಹಿಳಾ ಕ್ರಿಕೆಟ್‌ನ ಬಲಿಷ್ಠ ರೂಪವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa