
ಗದಗ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮನೆ ಮನೆ ಬೆಳಗುತ್ತಿರುವ ದೀಪಗಳು ಸಂತೋಷದ ಕಿರಣ ಹರಡುತ್ತಿದ್ದರೆ, ಕೆಲವರು ಅದೇ ಹಬ್ಬದ ನೆಪದಲ್ಲಿ ಜೂಜಾಟದ ಕಣದಲ್ಲಿ ಹಣ ಬೆಂಕಿಗೆ ಹಾಕುವ ಕೆಲಸ ಮಾಡ್ತಿದ್ರು. ದೀಪಾವಳಿಯ ಸಂಭ್ರಮದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರಿಕೆ ನೀಡಿದ್ದರೂ, ಗದಗ ಜಿಲ್ಲೆಯ ಭಾಗಗಳಲ್ಲಿ ಜನರು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್, ರಮ್ಮಿ ಮುಂತಾದ ಜೂಜಾಟಗಳಲ್ಲಿ ತೊಡಗಿದ್ದ ಮಾಹಿತಿ ಆಧಾರದಲ್ಲಿ, ಜಿಲ್ಲೆಯಾದ್ಯಂತ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ದೀಪಾವಳಿ ಹಬ್ಬದ ಮೂರು ದಿನಗಳ ಅವಧಿಯಲ್ಲಿ ನಡೆದ ವಿಶೇಷ ದಾಳಿ ವೇಳೆ, ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 61 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 463 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಅವರಿಂದ ರೂ. 5 ಲಕ್ಷ 15 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಶಿರಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು, 12 ಪ್ರಕರಣಗಳಲ್ಲಿ 86 ಜನರನ್ನು ಬಂಧಿಸಿ, ರೂ. 54 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಗದಗ ಗ್ರಾಮೀಣ ಠಾಣಾ ಪೊಲೀಸರು 8 ಪ್ರಕರಣಗಳನ್ನು ದಾಖಲಿಸಿ, 83 ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 2 ಲಕ್ಷ 3 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇತರ ಠಾಣೆಗಳಲ್ಲಿ ಗದಗ ನಗರ, ಲಕ್ಷ್ಮೇಶ್ವರ, ಗಜೇಂದ್ರಗಡ, ಬೆಟಗೇರಿ ಬಡಾವಣೆ ಸೇರಿದಂತೆ ಭರ್ಜರಿ ದಾಳಿಗಳು ನಡೆದಿದ್ದು, ಹಲವರು ಅಕ್ರಮ ಆಟಗಳಲ್ಲಿ ತೊಡಗಿದ್ದರೆಂಬುದು ಬೆಳಕಿಗೆ ಬಂದಿದೆ.
ದೀಪಾವಳಿ ಹಬ್ಬದ ಮುನ್ನೆಚ್ಚರಿಕೆಯಾಗಿ, ಎಸ್ಪಿ ರೋಹನ್ ಜಗದೀಶ್ ಜಿಲ್ಲೆಯ ಎಲ್ಲ ಠಾಣಾಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ವಿಶೇಷ ತಂಡಗಳನ್ನು ರಚಿಸಿ ರಾತ್ರಿ ಮತ್ತು ಮುಂಜಾನೆ ಸಮಯಗಳಲ್ಲಿ ನಿಗಾ ವಹಿಸುವಂತೆ ನಿರ್ದೇಶನ ನೀಡಲಾಗಿತ್ತು. ಅದರ ಫಲವಾಗಿ ಈ ಬಾರಿ ಜೂಜಾಟಗಾರರಿಗೆ ಹಬ್ಬದ ಸಂಭ್ರಮವೇ ಶಾಕ್ ಆಗಿದೆ.
ಜೂಜಾಟದ ಚಟದಿಂದ ಮನೆಮಂದಿ ನಾಶವಾಗುತ್ತಿರುವ ಅನೇಕ ಉದಾಹರಣೆಗಳಿವೆ. ಹಬ್ಬದ ನೆಪದಲ್ಲಿ ಹಣ ಸಂಪಾದನೆ ಕನಸು ಕಾಣುತ್ತಿದ್ದ ಕೆಲವರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಬೀದಿಗಿಳಿದಿರುವ ಘಟನೆಗಳೂ ಜಿಲ್ಲೆಯಲ್ಲಿ ದಾಖಲಾಗಿವೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ತಡೆ ನೀಡಿದ ಕ್ರಮವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಹಬ್ಬದ ಸಂತೋಷದಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಂಡು, ಮತ್ತೆ ಜೂಜಾಟದ ಚಟಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಿರುವುದು ಪೊಲೀಸ್ ಇಲಾಖೆಯ ಸಂವೇದನಾಶೀಲತೆ ಹಾಗೂ ಕಾನೂನು ಬದ್ಧತೆಯ ದೃಷ್ಟಿಯಿಂದ ಶ್ಲಾಘನೀಯವಾಗಿದೆ.
ಈ ದೀಪಾವಳಿಯಲ್ಲಿ ಜೂಜಾಟಗಾರರಿಗೆ ದೀಪದ ಬೆಳಕಿಗಿಂತ ಕಾನೂನಿನ ಕಿರಣವೇ ಹೆಚ್ಚು ತಟ್ಟಿದ್ದು “ಹಬ್ಬದ ನೆಪದಲ್ಲಿ ಅಕ್ರಮಕ್ಕೆ ಸ್ಥಳವಿಲ್ಲ” ಎಂಬ ಸಂದೇಶವನ್ನು ಗದಗ ಪೊಲೀಸರು ಸ್ಪಷ್ಟವಾಗಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP