ಕೋಲಾರ, ೨೩ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಿಳೆಯರ ಮೇಲಿನ ಹಿಂಸಾಚಾರ ಮಹಿಳೆಯರ ಮೇಲಿನ ಹಿಂಸಾಚಾರ ನಿಲ್ಲಲು ಮಹಿಳಾ ಸಂಘಟನೆಗಳ ಒತ್ತಾಯ.
ನಿಲ್ಲಲಿ, ಧರ್ಮಸ್ಥಳದಲ್ಲಿ ಹಿಂಸೆಗೆ ಬಲಿಯಾದ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗಲಿ ಎಂಬ ಆಶಯದೊಂದಿಗೆ ಆರಂಭವಾಗಿರುವ ಕೊಂದವರು ಯಾರು ಆಂದೋಲನದ ಮನವಿಗೆ ಓಗೊಟ್ಟು ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಸಂಜೆ ನ್ಯಾಯಕ್ಕಾಗಿ ಹಣತೆ ಹಚ್ಚೋಣ ಕಾರ್ಯಕ್ರಮ ನಡೆಯಿತು. ಮಹಿಳಾ ಸಂಘಟನೆಗಳು ಮತ್ತು ಮಹಿಳಾಪರ ಕಾಳಜಿಯುಳ್ಳವರು ಒಗ್ಗೂಡಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರ ನಿಲ್ಲಲಿ, ಧರ್ಮಸ್ಥಳದಲ್ಲಿ ದೌರ್ಜನ್ಯಕ್ಕೀಡಾಗಿ ಬಲಿಯಾದ ಮಹಿಳೆಯರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ ಸಿಗಲಿ ಎಂಬ ಕಳಕಳಿಯೊಂದಿಗೆ ಹಣತೆಗಳನ್ನು ಹಚ್ಚಿದರು.
ಮಹಿಳೆಯರ ವಿರುದ್ಧದ ಇಂತಹ ಅನೇಕ ಹಿಂಸೆಯ ಪ್ರಕರಣಗಳಲ್ಲಿ ಸತ್ಯವು ಕತ್ತಲಿನಲ್ಲಿದೆ, ಬೆಳಕಿನ ಹಬ್ಬದಂದು ತಮ್ಮ ಹಣತೆಯ ಬೆಳಕು ಸತ್ಯವನ್ನೂ ಬೆಳಕಿಗೆ ತರಲಿ ಎಂಬ ಆಶಯವನ್ನು ನಾಡಿನ ಮಹಿಳೆಯರು ವ್ಯಕ್ತಪಡಿಸಿದರು.
ಮೈಸೂರು, ನಂಜನಗೂಡು, ಚಾಮರಾಜನಗರ, ಬಿಳಿಗಿರಿರಂಗನ ಬೆಟ್ಟ, ಮಂಡ್ಯ, ತುಮಕೂರು, ತಿಪಟೂರು, ಚಿಕ್ಕನಾಯಕನಹಳ್ಳಿ, ದಾವಣಗೆರೆ, ಬಳ್ಳಾರಿಯ ವಣೇನೂರು, ಸಿರಗುಪ್ಪ, ವಿಜಯನಗರದ ಹೂವಿನಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೊಪ್ಪಳದ ಯಲಬುರ್ಗಾ, ಬಿಜಾಪುರದ ಸಿಂಧಗಿ, ಕಲಬುರ್ಗಿ, ಬೀದರ್ನ ಭಾಲ್ಕಿ, ಚಿಟಗುಪ್ಪ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ರಾಮನಗರ, ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ, ಆನೇಕಲ್, ಬೆಂಗಳೂರು ನಗರದ ಬಾಗಲೂರು, ತ್ಯಾಗರಾಜನಗರ, ನಾಗರಭಾವಿ, ಮಂಜುನಾಥನಗರ, ವಿಜಿನಾಪುರ, ಮಾಧವನಗರ, ಮೊದಲಾಗಿ ಸುಮಾರು ೪೦ಕ್ಕೂ ಹೆಚ್ಚು ಕಡೆಗಳಲ್ಲಿ ದೀಪ ಬೆಳಗಿಸಿ ಮಹಿಳೆಯರು, ಮಕ್ಕಳು ಮತ್ತು ಕಾಳಜಿಯುಳ್ಳ ನಾಗರಿಕರು ’ಹಿಂಸಾಚಾರದಿಂದ ನೊಂದವರಿಗೆ ನ್ಯಾಯ ಸಿಗಲಿ’ ಎಂದು ಬಯಸಿದರು.
ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ (ಓಈIW), ಗಮನ ಮಹಿಳಾ ಸಮೂಹ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಇಂದಿರಾಗಾಂಧಿ ಮಹಿಳಾ ಸಂಘ, ಸ್ಫೂರ್ತಿ ಸ್ವಸಹಾಯ ಸಂಘಗಳ ಒಕ್ಕೂಟ, ಕರ್ನಾಟಕ ಜನಶಕ್ತಿ, ತ್ಯಾಜ್ಯ ಶ್ರಮಿಕರ ಸಂಘ, ಮಾನಸ, ಮಹಿಳಾ ಮುನ್ನಡೆ ಮೊದಲಾದ ಹಲವು ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು. ಹಲವು ಮಂದಿ ಚಿಂತಕರು, ಬುದ್ಧಿಜೀವಿಗಳು ಮತ್ತು ವಕೀಲರು ’ನ್ಯಾಯಕ್ಕಾಗಿ ಹಣತೆ ಹಚ್ಚೋಣ’ ಅಭಿಯಾನದ ಭಾಗವಾದರು. ಧರ್ಮಸ್ಥಳದಲ್ಲಿ ಬಲಿಯಾದ ಮಹಿಳೆಯರ ಪ್ರಕರಣಗಳಲ್ಲಿ ಸತ್ಯವು ಬೆಳಕಿಗೆ ಬರಲಿ, ನಿಜವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿದವರು ಪತ್ತೆಯಾಗಲಿ ಹಾಗೂ ಅವರಿಗೆ ಕಾನೂನುರೀತ್ಯಾ ಶಿಕ್ಷೆಯಾಗಲಿ, ನೊಂದ ಕುಟುಂಬಗಳಿಗೆ ನ್ಯಾಯ ಸಿಗಲಿ, ರಾಜ್ಯದ ಯಾವ ಭಾಗದಲ್ಲೂ ಮಹಿಳೆಯರ
ಮೇಲೆ ದೌರ್ಜನ್ಯಗಳು ನಡೆಯದಿರಲಿ ಎಂಬ ಸಂದೇಶವನ್ನು ಸಮಾಜಕ್ಕೂ, ಸರ್ಕಾರಕ್ಕೂ ನೀಡಿದರು.
ಬೆಂಗಳೂರಿನ ಮೌರ್ಯ ಹೋಟೆಲ್ ಎದುರಿನ ಗಾಂಧಿ ಪ್ರತಿಮೆಯ ಬಳಿ ನಡೆಯಬೇಕಿದ್ದ ನ್ಯಾಯಕ್ಕಾಗಿ ಹಣತೆ ಹಚ್ಚೋಣ ಕಾರ್ಯಕ್ರಮ ಮಾತ್ರ ನಿಗದಿತ ಸ್ಥಳದಲ್ಲಿ ನಡೆಯದೇ ಹೋದದ್ದು ವಿಷಾದನೀಯ ಎಂದು ಸಂಘಟಕರು ಬೇಸರ ವ್ಯಕ್ತಪಡಿಸಿದರು.
ಹಣತೆ ಹಚ್ಚಲು ಬಂದಿದ್ದ ಮಹಿಳೆಯರು, ತಾವು ಯಾವುದೇ ಪ್ರತಿಭಟನೆ ನಡೆಸಲೆಂದು ಬಂದವರಲ್ಲ, ಯಾರಿಗೂ ಜೈಕಾರ, ಧಿಕ್ಕಾರ ಕೂಗಲು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸುತ್ತ, ಪಟಾಕಿಗಳನ್ನೂ ಸಿಡಿಸಲು ಬಂದಿರಲಿಲ್ಲ ಎಂದರು.
ತಾವು ಕಗ್ಗತ್ತಲಲ್ಲಿರುವ ಬಹುಪಾಲು ಮಹಿಳೆಯರ ಬದುಕುಗಳಿಗೆ ನ್ಯಾಯದ ಬೆಳಕು ಕಾಣಲೆನ್ನುವ ಆಶಯವನ್ನಷ್ಟೇ ಈ ದೀಪಾವಳಿಯಂದು ಸಾರ್ವಜನಿಕವಾಗಿ ಹಣತೆ ಹಚ್ಚುವ ಮೂಲಕ ವ್ಯಕ್ತಪಡಿಸಲು ಬಯಸಿದ್ದರು, ಆದರೆ ಈ ಪೊಲೀಸ್ ವ್ಯವಸ್ಥೆ ತಮಗೆ ನ್ಯಾಯಕ್ಕಾಗಿ ಹಣತೆ ಹಚ್ಚಲು ಕೊನೆಯ ಗಳಿಗೆಯಲ್ಲಿ ಅನುಮತಿ ನಿರಾಕರಿಸುತ್ತ ಅನ್ಯಾಯ ಬಗೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮಸ್ಥಳದಲ್ಲಿ ಮತ್ತು ರಾಜ್ಯದ ಇನ್ನಿತರ ಭಾಗಗಳಲ್ಲಿ ಮಹಿಳೆಯರ ಮೇಲಿನ ಅನೇಕ ಪ್ರಕರಣಗಳಲ್ಲಿ ನ್ಯಾಯ ಸಿಗದೇ ಹೋಗಿರುವಾಗ, ನ್ಯಾಯಕ್ಕಾಗಿ ಬಯಸುತ್ತಾ ಹಣತೆಯನ್ನಷ್ಟೇ ಬೆಳಗುವುದಕ್ಕೂ ಅವಕಾಶವಿಲ್ಲವೇ ಎಂದು ಮಹಿಳೆಯರು ಪ್ರಶ್ನಿಸಿದರು.
ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧೀಜಿಯ ಪ್ರತಿಮೆಯ ಮುಂದೆ ಅದೇ ಅಹಿಂಸೆ ಮತ್ತು ಸೌಹಾರ್ದತೆ ಗಳನ್ನೇ ಸಮಾಜದಲ್ಲಿ ಪಸರಿಸುತ್ತಿರುವ ಮಹಿಳೆಯರು ನ್ಯಾಯಕ್ಕಾಗಿ ಹಣತೆ ಹಚ್ಚಲು ಬಯಸಿದಾಗ, ಸತ್ಯದ ಬೆಳಕು ಹರಡಬಾರದೆನ್ನುವ ಪ್ರಭುತ್ವದ ಧೋರಣೆ ಅತ್ಯಂತ ದುರದೃಷ್ಟಕರ, ಇಂತಹ ಬೆಳವಣಿಗೆಗಳು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಆರೋಗ್ಯಕರವಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಆದರೆ, ಗಾಂಧಿ ಪ್ರತಿಮೆಯ ಬಳಿ ಸಭೆ ಸೇರಲು ಬಂದಿದ್ದವರೆಲ್ಲ ಅಷ್ಟಕ್ಕೆ ಸುಮ್ಮನಾಗದೆ, ಸಮೀಪದಲ್ಲೇ ಇದ್ದ, ಸಾಮಾಜಿಕ ಕಾರ್ಯಕರ್ತರೂ ಆದ ವಕೀಲ ಸ್ನೇಹಿತರೊಬ್ಬರ ಕಛೇರಿಯ ಎದುರು ಹಣತೆ ಹಚ್ಚಿ, ನ್ಯಾಯಕ್ಕಾಗಿ ನಡೆಯುತ್ತಿರುವ ಪ್ರಯತ್ನದೊಂದಿಗೆ ತಮ್ಮ ದನಿಯನ್ನೂ ಸೇರಿಸಿದರು.
ನಾಡಿನ ಹಿರಿಯ ಚಿಂತಕರೂ, ಬರಹಗಾರರೂ ಆದ ಡಾ.ಜಿ ರಾಮಕೃಷ್ಣ, ಹಿರಿಯ ಬರಹಗಾರ್ತಿಯರಾದ ಡಾ. ಎನ್ ಗಾಯತ್ರಿ, ಡಾ.ದು.ಸರಸ್ವತಿ, ಡಾ.ಆರ್.ಸುನಂದಮ್ಮ, ಕೆ.ಎಸ್. ಚಂಪಾವತಿ ಅವರನ್ನೂ ಒಳಗೊಂಡಂತೆ, ಅನೇಕ ಮಂದಿ
ಹೋರಾಟಗಾರ್ತಿಯರು ಮತ್ತು ಕಾಳಜಿಯುಳ್ಳ ನಾಗರೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ : ದೌರ್ಜನ್ಯಕ್ಕೀಡಾದ ಮಹಿಳೆಯರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ ಸಿಗಲಿ ಎಂಬ ಕಳಕಳಿಯೊಂದಿಗೆ ಕೋಲಾರದಲ್ಲಿ ಮಹಿಳೆಯರು ಹಣತೆಗಳನ್ನು ಹಚ್ಚಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್