ಕೋಲಾರ, ೨೩ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಿರಿಯ ಪತ್ರಕರ್ತ ಕೋಲಾರದ ಐ.ಹೆಚ್. ಸಂಗಮದೇವ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಬೆಂಗಳೂರು ಸಂಜಯನಗರದ ಮಂಗಳ ಎಂಬಾಕೆಗೆ ನಗರದ ೮ನೇ ಎಸಿಎಂಎಂ ನ್ಯಾಯಾಲಯ ಅ. ೧೮ ರಂದು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮಂಗಳ ೨೦೧೬ ರಲ್ಲಿ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿ ತಮ್ಮ ಕುಟುಂಬದ ಒಡೆತನದಲ್ಲಿರುವ ಫ್ಲ್ಯಾಟ್ ಒಂದನ್ನು ಐವತ್ತೈದು ಲಕ್ಷ ರೂಪಾಯಿಗೆ ಪತ್ರಕರ್ತ ಐ.ಎಚ್. ಸಂಗಮ ದೇವ್ ಅವರಿಗೆ ನೀಡುವುದಾಗಿ ನಂಬಿಸಿ, ಆ ಪೈಕಿ ಮುಂಗಡವಾಗಿ ಮೂವತ್ತು ಲಕ್ಷ ರೂಪಾಯಿಯನ್ನು ಸಂಗಮದೇವ್ ಅವರಿಂದ ಪಡೆದುಕೊಂಡಿದ್ದಳು. ಆದರೆ ಆ ಫ್ಲ್ಯಾಟಿಗೆ ಸಂಬಂಧಪಟ್ಟಂತೆ ಆಕೆಯ ಕುಟುಂಬದಲ್ಲಿ ವ್ಯಾಜ್ಯಗಳಿದ್ದುದು ಗೊತ್ತಾಗಿ ತಾವು ಕೊಟ್ಟ ಹಣ ವಾಪಸ್ ಮಾಡುವಂತೆ ಸಂಗಮದೇವ್ ಅವರು ಒತ್ತಾಯಿಸಿದಾಗ ಹಣ ವಾಪಸ್ ಮಾಡಲು ವರ್ಷಾನುಗಟ್ಟಲೆ ಸತಾಯಿಸಿದ್ದಲ್ಲದೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಳು.
ಈ ಸಂಬಂಧ ೨೦೨೨ರಲ್ಲಿ ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ಹಿರಿಯ ಪತ್ರಕರ್ತ ಐ.ಎಚ್. ಸಂಗಮ್ ದೇವ್ ಅವರಿಂದ ದೂರು ದಾಖಲಾಗಿದ್ದು, ಸಂಜಯನಗರ ಠಾಣೆ ಪೊಲೀಸರು ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಮಂಗಳಾಗೆ ೩ ತಿಂಗಳ ಸಾದಾ ಸಜೆ ಹಾಗೂ ದಂಡ ಎರಡನ್ನೂ ವಿಧಿಸಿದೆ. ಒಂದು ವೇಳೆ ದಂಡ ತೆರಲು ವಿಫಲವಾದಲ್ಲಿ ಮತ್ತೆ ೭ ದಿನಗಳು ಸಜಾ ಪಕ್ಕಾ ಆಗಲಿದೆ.
ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ವಿಶ್ವನಾಥ್ ಅವರು ವಾದ ಮಂಡಿಸಿದ್ದರು.
ಹಿರಿಯ ಪತ್ರಕರ್ತರಾಗಿರುವ ಐ.ಎಚ್. ಸಂಗಮ್ ದೇವ್ ಅವರು ಕಷ್ಟದಲ್ಲಿ ಸಿಲುಕಿದ್ದ ಅನೇಕರಿಗೆ ತಮ್ಮ ಬರವಣಿಗೆಯಿಂದ ನ್ಯಾಯ ಒದಗಿಸಿದ್ದರು.
ಅವರು ಹೆಸರಾಂತ ರವಿ ಬೆಳಗೆರೆ ಅವರ ಸಾರಥ್ಯದಲ್ಲಿ ಹೊರ ಬರುತ್ತಿದ್ದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದು, ರಾಜ್ಯಾದ್ಯಂತ ಎಲ್ಲರ ಗಮನ ಸೆಳೆದಿದ್ದರು.
ಕೋಲಾರ ನಗರದ ಗೋಕುಲ್ ಕಾಲೇಜು ಸಮೀಪವಿರುವ ಹೌಸಿಂಗ್ ಬೋರ್ಡ್ ಕಾಲೋನಿಯ (ಉದಯನಗರ) ನಿವಾಸಿಯಾಗಿದ್ದು, ಈಗ ಪ್ರಸುಸ್ತ ಬೆಂಗಳೂರಿನ ಯಲಹಂಕ ಸಮೀಪದ ಕೋಡಿಗೆಹಳ್ಳಿ ಯಲ್ಲಿ ವಾಸವಾಗಿದ್ದಾರೆ.
ಚಿತ್ರ : ಹಿರಿಯ ಪತ್ರಕರ್ತ ಐ.ಹೆಚ್. ಸಂಗಮದೇವ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್