ತುರ್ವಿಹಾಳ, 23 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಸರ್ಕಾರದ ವತಿಯಿಂದ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಸದುದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಸೇವೆ, ಮುತ್ರಪಿಂಡ ಸಮಸ್ಯೆಯಿಂದ ಬಳಲುವವರಿಗೆ ಡಯಾಲಿಸೀಸ್ ಸೇವೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರು ಹೇಳಿದರು.
ಅಕ್ಟೋಬರ್ 23ರ ಗುರುವಾರ ದಂದು ಜಿಲ್ಲೆಯ ಮಸ್ಕಿ ತಾಲೂಕಿನ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸುಸಜ್ಜಿತ ಡಯಾಲಿಸೀಸ್ ಕೇಂದ್ರ ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆರಿಗೆ ಕ್ಲಿಷ್ಟಕರವಾದಲ್ಲಿ ತಾಯಿ ಮಗುವಿನ ಆರೋಗ್ಯ ದೃಷ್ಟಿಯಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಸೌಲಭ್ಯ, ಮೂತ್ರಪಿಂಡದ ಗಂಭಿರ ಸಮಸ್ಯೆಯಿಂದ ಆರ್ಥಿಕವಾಗಿ ಸಂಕಷ್ಟಕ್ಕಿಡಾಗುವುದನ್ನು ತಪ್ಪಿಸಲು ಡಯಾಲಿಸೀಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಸಾಮಾನ್ಯವಾಗಿ ಒಂದು ಜೀವಕ್ಕೆ ಜನ್ಮ ನೀಡುವ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಒದಗಬಹುದಾದ ಗಂಡಾ0ತರಕಾರಿ ಸನ್ನಿವೇಶದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಎಷ್ಟೊ ಕುಟುಂಬಗಳು ಆರ್ಥಿಕ ತೊಂದರೆ ಅನುಭವಿಸುವ ಸಾಧ್ಯತೆಗಳನ್ನು ದೂರಮಾಡಲು ಹಾಗೂ ಮೂತ್ರಪಿಂಡದ ತೊಂದರೆಯಿ0ದ ತಿಂಗಳು ಡಯಾಲಿಸೀಸ್ ಮಾಡಿಸಲು ದೊಡ್ಡದೊಡ್ಡ ನಗರಗಳಿಗೆ ತೆರಳುತ್ತಿರುವುದನ್ನು ತಪ್ಪಿಸಿ ಅವರಿಗೆ ಆರ್ಥಿಕ ಸಂಕಷ್ಟದಿ0ದ ದೂರಮಾಡಲು ತುರ್ವಿಹಾಳ ಹಾಗೂ ಸುತ್ತಲಿನ 36 ಗ್ರಾಮಗಳು, 14 ಹಟ್ಟಿಗಳನ್ನೊಳಗೊಂಡ ಎಲ್ಲ ಸಾರ್ವಜನಿಕರು ಅನಕೂಲಕ್ಕಾಗಿ ಎರಡು ಸೇವೆಗಳನ್ನು ಆರಂಭಿಸಲಾಗಿದ್ದು, ಜನತೆ ಇದರ ಲಾಭವನ್ನು ಪಡೆಯಬೇಕೆಂದರು.
ಈ ವೇಳೆ ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೆರಿಗೆ ನಿರ್ವಹಣೆಗಾಗಿ ಪ್ರಸೂತಿ ತಜ್ಞರ, ಅರವಳಿಕೆ ತಜ್ಞರ ಹಾಗೂ ಮಕ್ಕಳ ತಜ್ಞರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಗುಣಮಟ್ಟದ ಮೂಲಭೂತ ಸೌಕರ್ಯಗಳೊಂದಿಗೆ ಹೆರಿಗೆ, ಮಕ್ಕಳ ಆರೈಕೆ, ಶಸ್ತ್ರಚಿಕಿತ್ಸೆ, ಹಾಗೂ ಡಯಾಲಿಸೀಸ್ ಸೇವೆಯನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ತುರ್ವಿಹಾಳ ಪಟ್ಟಣ ಪಂಚಾಯತ ಅಧ್ಯಕ್ಷ ಬಾಪೂಗೌಡ ದೇವರಮನಿ, ಉಪಾಧ್ಯಕ್ಷರಾದ ಲಕ್ಷ್ಮಿ ಸೋಮನಾಥ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ, ಪ್ರಸೂತಿ ತಜ್ಞರಾದ ಡಾ.ನಾಗರಾಜ ಕಾಟ್ವಾ, ಡಾ.ಜೀವನಜ್ಯೋತಿ, ಅರವಳಿಕೆ ತಜ್ಞೆ ಡಾ.ಕೋನಿಕಾ, ಮಕ್ಕಳ ತಜ್ಞರು ಡಾ.ದೀಪಿಕಾ, ಡಾ.ವೀರುಪಾಕ್ಷಪ್ಪ ಸೇರಿದಂತೆ ಪಟ್ಟಣ ಪಂಚಾಯತ ಸದಸ್ಯರು, ಗ್ರಾಮಸ್ಥರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್