ಕೋಲಾರ, ೧೯ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ನಮ್ಮ ಚುನಾವಣಾ ವ್ಯವಸ್ಥೆ ಬದಲಾಗುವವರೆಗೂ ಭ್ರಷ್ಟಾಚಾರ ನಿಲ್ಲದು, ಒತ್ತಡಗಳ ನಡುವೆ ಕೆಲಸ ಮಡುವ ನೌಕರರನ್ನು ಮಾತ್ರ ದೂರುವುದು ಸರಿಯಲ್ಲ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ನಿವೃತ್ತರಾಗಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಉಪಾಧ್ಯಕ್ಷರೂ ಆಗಿದ್ದ ಪುರುಷೋತ್ತಮ್ ದಂಪತಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಹಕ್ಕುಗಳನ್ನು ಪ್ರತಿಪಾದಿಸುವಾಗ ಜವಾಬ್ದಾರಿಗಳನ್ನು ಅರಿಯಬೇಕು, ನೌಕರರಿಗೆ ಒತ್ತಡಗಳಿರುವಂತೆ ಅಪೇಕ್ಷೆಗಳು ಇರುತ್ತವೆ ಎಂದ ಅವರು, ಒಟ್ಟಾರೆ ಸಂವಿಧಾನವೇ ಶ್ರೇಷ್ಠ ಅದರಡಿಯಲ್ಲೇ ಎಲ್ಲರೂ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ ಅವರು, ಜನಪರ ಸಂವಿಧಾನ ದೇಶದಲ್ಲಿ ಇರುವುದರಿಂದಲೇ ಅವ್ಯವಸ್ಥೆ,ಜಾತಿಯತೆ, ಭ್ರಷ್ಟಾಚಾರದ ನಡುವೆಯೂ ಒಂದಷ್ಟು ಅಭಿವೃದ್ದಿ ಕಾಣಲು ಸಾಧ್ಯವಾಗಿದೆ ಎಂದರು.
ನ್ಯಾಯಾ0ಗ, ಶಾಸಕಾ0ಗ, ಕಾರ್ಯಾ0ಗ, ಮಾಧ್ಯಮ ತೆರೆದ ಮನಸ್ಸಿನಿಂದ ಇರಬೇಕು, ಜನರಿಗೆ ಈಗಾಗಲೇ ರಾಜಕಾರಣದಲ್ಲಿರುವವರು ಮತ್ತು ನೌಕರರ ಮೇಲೆ ಸಿಟ್ಟಿದೆ, ಅದು ಸರಿಹೋಗಲು ಬದ್ದತೆಯ ಕರ್ತವ್ಯ ನಿರ್ವಹಣೆ ಅಗತ್ಯವಿದೆ ಮತ್ತು ನೌಕರರ ಸಂವಿಧಾನಬದ್ದ ಕರ್ತವ್ಯದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು ಎಂದರು.
ಸಾಮಾಜಿಕ ಸಮೀಕ್ಷೆಗೆ ಎಲ್ಲರೂ ಪಾಲ್ಗೊಳ್ಳು ಹೈಕೋರ್ಟ್ ಸೂಚಿಸಬೇಕಾಗಿತ್ತು, ಸಮೀಕ್ಷೆ ನಡೆಯದೇ ಸಂವಿಧಾನದ ಆಶಯಗಳಂತೆ ಸೌಲಭ್ಯಗಳು ಹಂಚಿಕೆಯಾಗುವುದು ಹೇಗೆ ಎಂದು ಪ್ರಶ್ನಿಸಿದರು.
ಪುರುಷೋತ್ತಮ್ ಅವರ ಸಾಮಾಜಿಕ ಸೇವೆಗಳನ್ನು ಪ್ರಸ್ತಾಪಿಸಿ, ಅಂತಹವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಲಿ, ಇತರ ನೌಕರರಿಗೆ ಅವರ ಮಾರ್ಗದರ್ಶನ ಸಿಗಲಿ ಎಂದು ಆಶಿಸಿದರು.
ಜಿಲ್ಲಾ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಪುರುಷೋತ್ತಮ್ ಅವರ ಶಿಸ್ತು,ಬದ್ದತೆ, ಸಂಘಟನೆಯಲ್ಲಿ ಅವರ ಕ್ರಿಯಾಶೀಲತೆ ಕಂಡು ಅವರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ, ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನೌಕರರ ಸಂಘದ ಅತ್ಯುತ್ತಮ ಕಾರ್ಯನಿರ್ವಹಣೆ, ಕ್ರೀಡಾಕೂಟ,ಪ್ರತಿಭಾ ಪುರಸ್ಕಾರಗಳಂತಹ ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ನೌಕರರ ಹೃದಯ ತಲುಪುವಂತೆ ಮಾಡುವಲ್ಲಿ ಅವರ ಸಹಕಾರವೂ ಕಾರಣವಾಗಿತ್ತು ಎಂದರು.
ಒ0ದೆಡೆ ಶಿಕ್ಷಕ ಗೆಳೆಯರ ಬಳಗ, ಪುರುಷೋತ್ತಮ್‌ರಂತಹವರ ಸಹಕಾರದಿಂದ ನೌಕರರ ಸಂಘದ ಕಾರ್ಯಚಟುವಟಿಕೆಗಳನ್ನು ಸಂಘಟನೆಯ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತೆ ನಡೆಸಲು ಕಾರಣವಾಯಿತು ಎಂದ ತಿಳಿಸಿ ಅಭಿನಂದಿಸಿದರು. ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್. ನಾರಾಯಣಸ್ವಾಮಿ, ನಿಸ್ವಾರ್ಥ ವ್ಯಕ್ತಿತ್ವ, ನಗುಮುಖದ ಪುರುಷೋತ್ತಮ್ ಅವರ ಸಾಮಾಜಿಕ ಕಾಳಜಿ ಶ್ಲಾಘನೀಯ, ಬಯಲು ಗ್ರಂಥಾಲಯಕ್ಕೆ ಪುಸ್ತಕ ಕೊಡಿಸುವುದಾಗಿ ತಿಳಿಸಿದ ಅವರು, ಅಗ್ನಿಪಥ್‌ಗೆ ಉಚಿತ ತರಬೇತಿ ನೀಡಿ ನೂರಾರು ಯುವಕರು ಬದುಕು ಕಟ್ಟಿಕೊಳ್ಳಲು ಸಹಕರಿಸಿದ್ದಾರೆ ಎಂದು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ್, ಭ್ರಷ್ಟಾಚಾರ ಎಲ್ಲಾ ಕಡೆ ಇದೆ, ಆದರೆ ತಮ್ಮ ಇಲಾಖೆಯಲ್ಲಿ ಶೇ.೭೦ ಕ್ಕೂ ಹೆಚ್ಚು ಭ್ರಷ್ಟ ಮುಕ್ತವಾಗಿ ಕೆಲಸ ಮಾಡಿದ್ದೇವೆ, ಅಂತಹ ವಾತಾವರಣ ಸೃಷ್ಟಿಸಿದ್ದೆವು ಎಂದು ಸ್ಮರಿಸಿದರು.
ಕೋಲಾರ ಕ್ರೀಡಾಸಂಘದ ಮೂಲಕ ತರಬೇತಿ ನೀಡಿ ಅನೇಕರು ಸೇನೆಗೆ ಆಯ್ಕೆಯಾಗುವಂತೆ ಮಾಡಿದ್ದಕ್ಕೆ ತೃಪ್ತಿ ಇದೆ, ಬಯಲು ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಅಭ್ಯಾಸ ಹೆಚ್ಚಿಸಲು ಕ್ರಮವಹಿಸಿದ್ದೇನೆ ಎಂದ ಅವರು, ಬದಲಾದ ಆಹಾರ ಪದ್ದತಿಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು, ಈ ಕುರಿತು ಅರಿವು ನೀಡಲು ಕ್ಯಾನ್ಸರ್ ನಿರ್ಮೂಲನಾ ಅಭಿಯಾನ ನಡೆಸುವ ಆಶಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಮಾತನಾಡಿ, ಪುರುಷೋತ್ತಮ್ ಅವರ ಶಿಸ್ತುಬದ್ದ ನಡವಳಿಗೆ ನಮಗೆ ಆದರ್ಶ ಎಂದರು. ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ನಿವೃತ್ತಿ ನಂತರ ಉತ್ತಮ ಆರೋಗ್ಯಕ್ಕಾಗಿ ಹೇಗಿರಬೇಕು ಎಂದು ತಿಳಿಸಿಕೊಟ್ಟರು.
ನೌಕರರ ಸಂಘದ ಉಪಾಧ್ಯಕ್ಷ ಶಿವಕುಮಾರ್ ಸ್ವಾಗತಿಸಿ, ನಿರ್ದೇಶಕ ವೆಂಕಟಾಚಲಪತಿಗೌಡ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶ್ರೀಮತಿ ಪುರುಷೋತ್ತಮ್, ಪತ್ರಕರ್ತ ಕೆ.ಎಸ್.ಗಣೇಶ್,ಕೆಜಿಎಫ್ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪಿಡಿಒ ನಾಗರಾಜ್,ಗೋವಿಂದ್,ಸರ್ವೆ ರವಿ, ಸುಬ್ರಮಣಿ, ಗೆಳೆಯರ ಬಳಗದ ಚಿಕ್ಕಣ್ಣ, ವೆಂಕಟರಾ0, ಸೋಮಶೇಖರ್, ಸುನೀಲ್,ಸಂದೀಪ್, ಚಂದು,ಖಜಾನೆ ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿತ್ರ : ಕೋಲಾರ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ನಿವೃತ್ತರಾಗಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಉಪಾಧ್ಯಕ್ಷರೂ ಆಗಿದ್ದ ಪುರುಷೋತ್ತಮ್ ದಂಪತಿಗಳನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್