ಬಳ್ಳಾರಿ, 9 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾಗಿರುವ ಒಟ್ಟು 11,200 ಪ್ರಕರಣಗಳ ಪೈಕಿ 2024ರ ಡಿಸೆಂಬರ್ ಅಂತ್ಯವರೆಗೆ 8,061 ಪ್ರಕರಣಗಳನ್ನು ವಿಲೇ ಮಾಡಿದ್ದು 3,139 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಂಭಟ್ ಅವರು ತಿಳಿಸಿದ್ದಾರೆ.
ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು, ಆಯೋಗದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಆಯೋಗವೇ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಈಗಾಗಲೆ 16 ಜಿಲ್ಲೆಗಳಿಗೆ ಭೇಟಿ ನೀಡಿದ್ದು ಜಿಲ್ಲಾ ಹಂತದಲ್ಲಿಯೇ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರು – ಸರ್ಕಾರಿ ಸಿಬ್ಬಂದಿ ದೂರುಗಳನ್ನು ಆನ್‍ಲೈನ್ ಅಥವಾ ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ. ದೂರುದಾರರು ಇಲ್ಲದಿದ್ದರೂ ಅವರ ಪರವಾಗಿ ಬೇರೆ ಯಾರಾದರೂ ದೂರು ನೀಡಬಹುದು ಎಂದು ಅವರು ತಿಳಿಸಿದರು.
*ಜಿಲ್ಲೆಯಲ್ಲಿ 20 ಪ್ರಕರಣ ಇತ್ಯರ್ಥ, 7 ಪ್ರಕರಣ ಬಾಕಿ:*
ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 27 ಪ್ರಕರಣಗಳಲ್ಲಿ 20 ಪ್ರಕರಣ ಇತ್ಯರ್ಥ ಪಡಿಸಲಾಗಿದ್ದು, 07 ಪ್ರಕರಣ ಬಾಕಿ ಇವೆ ಎಂದು ಅಧ್ಯಕ್ಷರು ತಿಳಿಸಿದರು.
ಆಯೋಗದ ನ್ಯಾಯಾಂಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು, ಆಯೋಗದಿಂದ ಮಾನವ ಹಕ್ಕುಗಳ ಉಲ್ಲಂಘನೆ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ ಎಂದರು.
ಮಾನವ ಹಕ್ಕುಗಳ ಆಯೋಗದ ಹೆಸರು ಹೇಳಿಕೊಂಡು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಕೆ ಒಡ್ಡುವುದು, ಹಣ ವಸೂಲಿ ಮಾಡಲು ಪ್ರಯತ್ನಿಸುವುದು ಕಂಡುಬಂದಲ್ಲಿ ಆಯೋಗಕ್ಕೆ ತಿಳಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಆಯೋಗದ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್ ಹಾಗೂ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್