ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಅಧಿಕಾರಿಗಳ ನಿಯೋಜನೆ
ಕೋಲಾರ, ೦೯ ಜನವರಿ (ಹಿ.ಸ.):ಆಂಕರ್: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ ೧ ಮತ್ತು ೨ ರಲ್ಲಿ ನಡೆಸಲಾಗಿರುವ ಒತ್ತುವರಿಯನ್ನು ಗುರುತಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಜನವರಿ ೧೫ ರಂದು ಜಂಟಿ ಸರ್ವೆ ನಡೆಸಲಿದೆ.
ಜಂಟಿ ಸರ್ವೆ ನಡೆಸುವಂತೆ ರಮೇಶ್ ಕುಮಾರ್ ೨೦೧೧ ಮತ್ತು ೨೦೧೩ ರಲ್ಲಿ ರಾಜ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು ನ್ಯಾಯಾಲಯ ಆದೇಶ ಮಾಡಿ ೧೩ ವರ್ಷಗಳು ಕಳೆದಿದ್ದರೂ ಜಂಟಿ ಸರ್ವೆ ನಡೆದಿರಲಿಲ್ಲ. ಈ ಬಗ್ಗೆ ಶ್ರೀನಿವಾಸಪುರದ ವಕೀಲ ಶಿವಾರೆಡ್ಡಿ ರಾಜ್ಯ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯ ಮೂರ್ತಿ ಸೂರಜ್ ಗೋವಿಂದ ರಾಜು ಜಂಟಿ ಸರ್ವೆ ನಡೆಸುವಂತೆ ನಿರ್ದೆಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜನವರಿ ೨ ರಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಭೂ ದಾಖಲೆಗಳ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು. ನ್ಯಾಯಾಲಯದ ಆದೇಶದಂತೆ ಜಂಟಿ ಸರ್ವೆ ನಡೆಸಲು ಅಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅರ್ಜಿದಾರರಾದ ರಮೇಶ್ ಕುಮಾರ್ ಅವರಿಗೆ ಜಂಟಿ ಸರ್ವೆಗೆ ಹಾಜರಾಗಲು ಈಗಾಗಲೇ ಖುದ್ದಾಗಿ ನೋಟೀಸ್ ಜಾರಿ ಮಾಡಲಾಗಿದೆ. ಅಲ್ಲದೆ ನೊಂದಾಯಿತ ಅಂಚೆ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಅಂದು ಬೆಳಗ್ಗೆ ಎಂಟುವರೆ ಗಂಟೆಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿರುವಂತೆ ಕಟ್ಟನಿಟ್ಟಿನ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೆಶಕರು ಜನವರಿ ೧೫ ರಂದು ನಡೆಯಲಿರುವ ಜಂಟಿ ಸರ್ವೆಗೆ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ವಿವಿಧ ತಾಲ್ಲೂಕುಗಳ ಅಧೀಕ್ಷಕರು, ತಪಾಸಕರು, ಹಾಗೂ ಭೂ ಮಾಪಕರು ಸೇರಿದಂತೆ ೧೭ ಮಂದಿಯನ್ನು ಜಂಟಿ ಸರ್ವೆಗೆ ನಿಯೋಜಿಸಲಾಗಿದೆ. ಮಾಲೂರು ಕೋಲಾರ ಶ್ರೀನಿವಾಸಪುರ ಬಂಗಾರಪೇಟೆ ಮುಳಬಾಗಿಲು ತಾಲ್ಲೂಕುಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಯಾವುದೇ ಕಾನೂನು ಸುವ್ಯವಸ್ಥೆ ಎದುರಾಗದಂತೆ ಸರ್ವೆಗೆ ಭದ್ರತೆ ಒದಗಿಸಲು ಪೋಲೀಸ್ ಇಲಾಖೆ ಸಿದ್ದತೆ ನಡೆಸುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ ನವೆಂಬರ್ ಮತ್ತು ಜನವರಿ ತಿಂಗಳಲ್ಲಿ ಎರಡು ಬಾರಿ ಸರ್ವೆ ನಡೆಸಲು ಸಮಯ ನಗದಿ ಪಡಿಸಲಾಗಿತ್ತು . ಆದರೆ ರಾಜಕೀಯ ಪ್ರಭಾವದಿಂದಾಗಿ ಸರ್ವೆಯನ್ನು ಸಕಾರಣಗಳಿಲ್ಲದೆ ಮುಂದೂಡಲಾಗಿತ್ತು. ಇದರಿಂದಾಗಿ ವಕೀಲ ಶಿವಾರೆಡ್ಡಿ ಜಂಟಿ ಸರ್ವೆ ನಡೆಸುವಂತೆ ಕೋರಿ ರಾಜ್ಯ ಹೈಕೋಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಚಿತ್ರ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್