ಹುಬ್ಬಳ್ಳಿ, 06 ಜನವರಿ (ಹಿ.ಸ.) :
ಆ್ಯಂಕರ್ : ಅಡುಗೆ ಮನೆಯಲ್ಲಿ ಉಪ್ಪಿಲ್ಲದೆ ಆಹಾರ ತಯಾರಾಗುವುದಿಲ್ಲ. ರುಚಿಗೆ ತಕ್ಕಷ್ಟು ಉಪ್ಪು ಬಿದ್ದಾಗಲೇ ಆ ಅಡುಗೆಗೆ ರುಚಿ ಬರುವುದು. ಹಾಗಾಗಿ ಪ್ರತಿಯೊಬ್ಬರ ಮನೆಗಳಲ್ಲಿಯೂ ಉಪ್ಪನ್ನು ಬಳಕೆ ಮಾಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಎರಡು ರೀತಿಯ ಉಪ್ಪು ಕಂಡು ಬರುವುದನ್ನು ನೀವು ಗಮನಿಸಿರಬಹುದು.
ಒಂದು ಬಿಳಿ ಉಪ್ಪು ಇನ್ನೊಂದು ಕಪ್ಪು ಉಪ್ಪು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಿಳಿ ಉಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಬಿಳಿ ಉಪ್ಪಿಗಿಂತ ಕಪ್ಪು ಉಪ್ಪು ಉತ್ತಮ. ಹಾಗಾದರೆ ಈ ಉಪ್ಪು ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಸಾಮಾನ್ಯವಾಗಿ ಕಪ್ಪು ಉಪ್ಪುಗಳನ್ನು ಚಾಟ್ ಅಥವಾ ಇನ್ನಿತರ ಪದಾರ್ಥಗಳನ್ನು ತಯಾರಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳು ಅಧಿಕವಾಗಿರುವುದರಿಂದ ಸಾಮಾನ್ಯ ಉಪ್ಪಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.ಇದರಲ್ಲಿ ಕಡಿಮೆ ಸೋಡಿಯಂ ಅಂಶವಿರುವುದರಿಂದ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಉಲ್ಬಣ ಗೊಳಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೆ ತಮ್ಮ ಆಹಾರಗಳಲ್ಲಿ ಈ ಉಪ್ಪನ್ನು ಅಲ್ಪ ಪ್ರಮಾಣದಲ್ಲಿಯಾದರೂ ಸೇವನೆ ಮಾಡಬೇಕು. ಅಲ್ಲದೆ ಕಪ್ಪು ಉಪ್ಪಿನ ಸೇವನೆಯು, ದೇಹವು ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa