ಕೊಪ್ಪಳ, 15 ಜನವರಿ (ಹಿ.ಸ.) :
ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಧಾರ್ಮಿಕ ಸಾಮಾಜಿಕ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಾಡಿನ ಅನೇಕ ಭಕ್ತರು ವಿಶಿಷ್ಟ ಭಕ್ತಿ ಸೇವೆಗಳನ್ನು ಸಲ್ಲಿಸುವುದರ ಮೂಲಕ ಭಕ್ತಿ ಅರ್ಪಿಸುವದು ಇಲ್ಲಿ ಸಾಮಾನ್ಯ .
ಸಿಂಧನೂರಿನ ವಿಜಯಕುಮಾರ್ ಹಾಗೂ ಗೆಳೆಯರ ಬಳಗದ 10 ಜನರ ತಂಡ ನಿರಂತರವಾಗಿ ಸಮಾಜ ಸೇವೆ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ವರ್ಷವೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೆಳೆಯರ ಬಳಗ ವಿಶೇಷವಾಗಿ ಮಹಾ ದಾಸೋಹಕ್ಕೆ ಸೇವೆಯನ್ನು ಸಲ್ಲಿಸುತ್ತಿದೆ. ಇಂದು ರಥೋತ್ಸವ ಹಾಗೂ ನಾಳೆ ಎರಡು ದಿನಗಳ ಕಾಲ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಜಿಲೇಬಿಯನ್ನು ತಯಾರು ಮಾಡಿ ಬಡಿಸುವ ಸೇವಾ ಕೈಂಕರ್ಯಕ್ಕೆ ಈ ತಂಡ ಸಿದ್ದವಾಗಿದೆ.
ಜಿಲೇಬಿ ತಯಾರಿ ಸೇವೆಗೆ ಸುಮಾರು 50 ಕ್ವಿಂಟಲ್ ಮೈದಾ ಹಿಟ್ಟು, 130 ಕ್ವಿಂಟಲ್ ಸಾವಯವ ಬೆಲ್ಲ, 1600 ಲೀಟರ್‍ಎಣ್ಣೆ, 300 ಲೀಟರ್ ತುಪ್ಪ, 20 ಕೆಜಿ ಯಾಲಕ್ಕಿ, 150 ಲೀಟರ್ ಮೊಸರು ಅನ್ನು ಬಳಸಲಾಗುತ್ತಿದೆ.
ಎರಡು ದಿನಗಳ ಕಾಲ ಸುಮಾರು 450 ಕ್ವಿಂಟಲ್ ಜಿಲೇಬಿಯನ್ನು ತಯಾರಿಸಲಾಗುತ್ತದೆ. ಸುಮಾರು 12 ರಿಂದ 14 ಲಕ್ಷ ಜಿಲೇಬಿ ತಯಾರಾಗಬಹುದು ಎಂದು ಬಾಣಸಿಗರು ಹೇಳುತ್ತಾರೆ.
ಈ ಒಂದು ಕಾರ್ಯಕ್ಕೆ 120 ಬಾಣಸಿಗರು,ಅವರಿಗೆ ಸಹಾಯ ಮಾಡಲು 150 ಜನ ಹಾಗೂ ಕಾರ್ಯಕರ್ತರು ನಿರಂತರವಾಗಿ ಸೇವೆಯನ್ನು ಮಾಡುತ್ತಿದ್ದಾರೆ. ಈ ಜಿಲೇಬಿಗಳನ್ನು ತಯಾರಿಸಿದ ನಂತರ ವ್ಯವಸ್ಥಿತವಾಗಿಡಲು 1300 ಟ್ರೇಗಳನ್ನು ಸಿಂಧನೂರಿನ ಮಹಾನಂದಿ ಪ್ಲಾಸ್ಟಿಕ್ ಮಾಲೀಕರಾದ ಲಕ್ಷ್ಮಣ್ ಶೆಟ್ಟಿ ಅವರು ಉಚಿತವಾಗಿ ನೀಡಿದ್ದಾರೆ.
ಈ ಎರಡು ದಿನಗಳ ಕಾಲ ಜಾತ್ರಾ ಮಹಾ ದಾಸೋಹದಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರು ಜಿಲೇಬಿಯನ್ನು ಸವಿಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ-9449247259 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್