ವಯನಾಡ್ , 1 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕೇರಳದ ವಯನಾಡ್ ನಲ್ಲಿ ಸಂಭವಿಸಿದಂತಹ ಭೀಕರ ಭೂಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯು ತಾತ್ಕಾಲಿಕ ಸ್ಟೀಲ್ ಸೇತುವೆ ನಿರ್ಮಾಣ ಮಾಡುತ್ತಿದೆ. ಬುಧವಾರ ತಡರಾತ್ರಿವರೆಗೂ ತೀವ್ರ ಕಾರ್ಯಾಚರಣೆ ನಡೆದಿತ್ತು, ಇಂದು ಬೆಳಗ್ಗೆಯಿಂದಲೂ ಮತ್ತೆ ಕಾರ್ಯ ಆರಂಭಗೊಂಡಿದೆ.
ಪ್ರಮುಖವಾಗಿ ಭಾರತೀಯ ಸೇನೆಯು ಸ್ಟೀಲ್ ಸೇತುವೆ ನಿರ್ಮಾಣ ಮಾಡುತ್ತಿದ್ದು ಅದೀಗ ಪೂರ್ಣಗೊಳ್ಳುವ ಹಂತದಲ್ಲಿದೆ. ರಾತ್ರಿ ಇಡೀ ಸೇತುವೆ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಒಂದೆಡೆ ತುಂಬಿ ಹರಿಯುತ್ತಿರುವ ನದಿಗಳ ಮಧ್ಯೆ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.
ಸೇನಾ ಸಿಬ್ಬಂದಿ, ಎನ್‌ಡಿಆರ್‌ಎಫ್, ರಾಜ್ಯ ತುರ್ತು ಸೇವೆಗಳ ಸಿಬ್ಬಂದಿ ಮತ್ತು ಸ್ಥಳೀಯ ಜನರು ಸೇರಿದಂತೆ ಪಾರುಗಾಣಿಕಾ ನಿರ್ವಾಹಕರು ಅನೇಕ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದರೂ ಸಹ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಹೆಚ್ಚು ಹಾನಿಗೊಳಗಾದ ಗ್ರಾಮಗಳಲ್ಲಿ ಒಂದಾದ ಮುಂಡಕ್ಕೈನಲ್ಲಿ, ಕತ್ತರಿಸಿದ ಭಾಗವನ್ನು ಸಮೀಪಿಸಲು ಮತ್ತು ಅಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಹಗ್ಗಗಳು ಮತ್ತು ಏಣಿಗಳನ್ನು ಬಳಸಿ ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ.
ಮುಂಡಕ್ಕೈ ಮತ್ತು ಚುರಲ್‌ಮಲಾ ಅತ್ಯಂತ ಪೀಡಿತ ಪ್ರದೇಶಗಳನ್ನು ಸಂಪರ್ಕಿಸಲು 190 ಅಡಿ ಉದ್ದದ ಬೈಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
24 ಟನ್ ಭಾರದ ಈ ಸೇತುವೆ ಇಂದು ಗುರುವಾರ ಸಂಜೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ