ಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ-ಆರ್.ಅಶೋಕ
ಬೆಂಗಳೂರು, 27 ಏಪ್ರಿಲ್ (ಹಿ.ಸ): ಆ್ಯಂಕರ್ : ಬರಗಾಲದಿಂದ ಬಳಲಿದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರ
ಆರ್.ಅಶೋಕ


ಬೆಂಗಳೂರು, 27 ಏಪ್ರಿಲ್ (ಹಿ.ಸ):

ಆ್ಯಂಕರ್ : ಬರಗಾಲದಿಂದ ಬಳಲಿದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿದ್ದು, ಇದರಲ್ಲಿ ಕಾಂಗ್ರೆಸ್ ಸರ್ಕಾರದ ಯಾವುದೇ ಪಾತ್ರವಿಲ್ಲ. ಈಗ ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ನೀಡಿದಂತೆಯೇ ಡಬಲ್ ಪರಿಹಾರ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಜಾನೆ ಖಾಲಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ ಬಳಿ ಹಣವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಬರಗಾಲದ ಪರಿಹಾರಕ್ಕಾಗಿ ಸರಿಯಾದ ಮಾಹಿತಿ ನೀಡಲು ಕೂಡ ಸರ್ಕಾರ ವಿಳಂಬ ಮಾಡಿತ್ತು. ಕೋರ್ಟ್ ಆದೇಶವಾಗಿದ್ದರೆ ಕರ್ನಾಟಕಕ್ಕೆ ಮಾತ್ರ ಪರಿಹಾರ ಬರಬೇಕಿತ್ತು. ಆದರೆ ಕೇಂದ್ರ ಸರ್ಕಾರವೇ ಕ್ರಮ ವಹಿಸಿ ಪರಿಹಾರ ನೀಡಿದೆ. ಇದರಲ್ಲಿ ಕಾಂಗ್ರೆಸ್ ನ ಶ್ರಮ ಏನೂ ಇಲ್ಲ. ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಮಾತ್ರ ಹಣ ಬಿಡುಗಡೆಯಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರದ ಹಣವನ್ನು ಲೂಟಿ ಮಾಡಬಾರದು. ಇದರಲ್ಲೂ ಕೈ ಚಳಕ ಮಾಡಿ ದುಡ್ಡು ಹೊಡೆಯದಂತೆ ನಾವು ಕಾವಲು ಕಾಯುತ್ತೇವೆ. ಬರದಿಂದ ನೊಂದ ರೈತರ ಖಾತೆಗೆ ನೇರವಾಗಿ ಪರಿಹಾರ ನೀಡಬೇಕು. ಈವರೆಗೆ ಬರ ಪರಿಹಾರ ಬಂದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ದುಪ್ಪಟ್ಟು ಪ್ರವಾಹ ಪರಿಹಾರ ನೀಡಿತ್ತು. ಈಗಲೂ ಸರ್ಕಾರ ತನ್ನ ಕಡೆಯಿಂದ ಡಬಲ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಪರಿಹಾರದ ಬಗ್ಗೆ ಸಾಮಾನ್ಯ ಪ್ರಜ್ಞೆ ಹಾಗೂ ತಿಳಿವಳಿಕೆ ಇಲ್ಲ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿತ್ತು ಎಂದು ತಿಳಿಸಲಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವೇ ಇತ್ತು. ಆಗಿನ ಪರಿಹಾರಕ್ಕೂ ಈಗ ನೀಡಿರುವ ಪರಿಹಾರಕ್ಕೂ ಜನರೇ ಹೋಲಿಕೆ ಮಾಡಲಿ. ವಿದ್ಯುತ್ ದರ, ಮಾರ್ಗಸೂಚಿ ದರ, ದತ್ತು ಪಡೆಯಲು ದರ ಹೀಗೆ ಎಲ್ಲದರಲ್ಲೂ ಸರ್ಕಾರ ದರ ಏರಿಕೆ ಮಾಡಿದೆ ಎಂದು ದೂರಿದರು.

ಮುಸ್ಲಿಂ ಓಲೈಕೆ

ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ನೀಡಿ ಓಲೈಕೆ ರಾಜಕಾರಣ ಮಾಡಿದೆ. ಮುಸ್ಲಿಮರು ಹಲ್ಲೆ ಮಾಡಿದರೆ, ಪಾಕಿಸ್ತಾನ ಜಿಂದಾಬಾದ್ ಎಂದರೆ ಕ್ರಮ ಕೈಗೊಳ್ಳುವುದಿಲ್ಲ. ದೇಶದ ಸಂಪತ್ತಿನ ಹಕ್ಕು ಮುಸ್ಲಿಮರಿಗಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದ್ದರಿಂದ ಹಿಂದುಳಿದ ವರ್ಗಗಳ ಮತ ಕೇಳುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲು ನೀಡಬಾರದು ಎಂದು ಹೇಳಲಾಗಿದೆ. ಆದರೆ ಇದನ್ನು ಮೀರಿ ಕಾಂಗ್ರೆಸ್ ಮೀಸಲು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಹಲ್ಲೆ

ಸರ್ಜಾಪುರ ನಿವಾಸಿ ಪ್ರಕಾಶ್ ಅವರ ಮೇಲೆ ಕಾಂಗ್ರೆಸ್ ಮುಖಂಡರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವನು ರೌಡಿ ಶೀಟರ್ ಆಗಿದ್ದರೂ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಕೋಲಾರದಲ್ಲಿ ಜೆಡಿಎಸ್ ಕಾರ್ಯಕರ್ತ ಗೋವರ್ಧನ್ ಅವರ ಮೇಲೂ ಹಲ್ಲೆಯಾಗಿದೆ. ಪೊಲೀಸರು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ವರ್ತಿಸುವುದನ್ನು ಖಂಡಿಸುತ್ತೇನೆ ಎಂದರು.

ಸಹೋದರ ಸೋತಂತೆ ಡಿ.ಕೆ.ಶಿವಕುಮಾರ್ ಅವರಿಗೆ ಕನಸು ಬಿದ್ದಿದ್ದು, ಅದಕ್ಕಾಗಿ ತಮಿಳುನಾಡು, ಉಡುಪಿಗೆ ಹೋಗಿ ಪೂಜೆ ಮಾಡಿದ್ದಾರೆ. ಡಿ.ಕೆ.ಸುರೇಶ್ ಅವರನ್ನು ಹೇಗೆ ಎಂಎಲ್ಸಿ ಮಾಡಬೇಕೆಂದು ಅವರು ಚಿಂತಿಸಿದ್ದಾರೆ. ಅವರಿಗೆ ಸೋಲಿನ ಭೀತಿ ಉಂಟಾಗಿರುವುದರಿಂದಲೇ ಪ್ರಚಾರಕ್ಕೆ ಪದೇ ಪದೆ ಬೆಂಗಳೂರು ಗ್ರಾಮಾಂತರಕ್ಕೆ ಹೋಗಿದ್ದಾರೆ. ಬಿಜೆಪಿಗೆ ಯಾವುದೇ ಭಯವಿಲ್ಲ. ನಮಗೆ 400 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಮೈತ್ರಿಕೂಟದ ಬಹುತೇಕರು ಜೈಲಲ್ಲಿ, ಬೇಲ್ ನಲ್ಲಿ ಇದ್ದಾರೆ. ಫಲಿತಾಂಶದ ಮೊದಲೇ ನಾವು ಒಂದು ಸ್ಥಾನ ಗೆದ್ದಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಬರಲು ಸಿಎಂ ಸಿದ್ದರಾಮಯ್ಯನವರೇ ಕಾರಣ. ಡಿ.ಕೆ.ಶಿವಕುಮಾರ್ ಸೋದರರನ್ನು ಮುಗಿಸಲು ಸಿಎಂ ಸಿದ್ದರಾಮಯ್ಯ ತಂತ್ರ ಮಾಡಿದ್ದಾರೆ. ಕಾಂಗ್ರೆಸ್ ನವರೇ ಅವರ ಕಾಲ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಾರೆ. ಸಿದ್ದರಾಮಯ್ಯನವರಿಗೆ ವಿರೋಧಿಗಳನ್ನು ಹೇಗೆ ಮುಗಿಸಬೇಕೆಂದು ಗೊತ್ತಿದೆ. ಅದಕ್ಕೆ ಉದಾಹರಣೆಯಾಗಿ ಡಾ.ಜಿ.ಪರಮೇಶ್ವರ್ ಇದ್ದಾರೆ ಎಂದರು.

14 ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದ್ದು, 12 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಸಿಲಿದ್ದರೂ ಜನರು ಬಂದು ಮತದಾನ ಮಾಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಎರಡನೇ ಹಂತದಲ್ಲಿ 14 ಸ್ಥಾನ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಬಿಟಿ ಮೂಲಕವೇ ನೀಡಿ

ರಾಜ್ಯ ಸರ್ಕಾರ ದುಡ್ಡು ಹೊಡೆಯಲು ಚೆಕ್ ಮೂಲಕ ಪರಿಹಾರ ನೀಡಬಾರದು. ಡಿಬಿಟಿ ಮೂಲಕವೇ ನೇರವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande