ಕಾಂಗ್ರೆಸ್ ಸರ್ಕಾರದಿಂದ ಬರ, ಭಯೋತ್ಪಾದನೆ ಗ್ಯಾರಂಟಿ ; ಡಾ. ಸುಧಾಕರ್ ವಾಗ್ದಾಳಿ
ಕೋಲಾರ, ೨೪ ಏಪ್ರಿಲ್ (ಹಿ.ಸ) : ಆ್ಯಂಕರ್ : ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಡಾ.ಕೆ. ಸುಧಾಕರ್ ಪ್ರಚಾರ ನಡೆಸಿದರು.


ಕೋಲಾರ, ೨೪ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ರೈತರ ಆತ್ಮಹತ್ಯೆಯ ಗ್ಯಾರಂಟಿಗಳನ್ನು ನೀಡಿದೆ. ಆದ್ದರಿಂದ ಇಡೀ ರಾಜ್ಯ ಹಾಗೂ ದೇಶ ಸುರಕ್ಷಿತವಾಗಿರಲು ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ಚುನಾವಣಾ ಗಿಮಿಕ್ ಮಾಡುವಲ್ಲಿ ನಿಸ್ಸೀಮರು. ಸೋಲು ಸ್ಪಷ್ಟವಾಗಿ ಕಾಣುತ್ತಿರುವುದರಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಹೇಳಲು ಯಾವುದೇ ಸಾಧನೆ ಇಲ್ಲವಾಗಿ ಚಾರಿತ್ರ್ಯವಧೆ, ತೇಜೋವಧೆ ಮಾಡುತ್ತಿದ್ದಾರೆ. ಜನರು ಇವ್ಯಾವುದಕ್ಕೂ ಕಿವಿಗೊಡಬಾರದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಗ್ಯಾರಂಟಿ, ರೈತರ ಆತ್ಮಹತ್ಯೆಯ ಗ್ಯಾರಂಟಿ, ಭಯೋತ್ಪಾದನೆ ಗ್ಯಾರಂಟಿ, ಖಜಾನೆ ಖಾಲಿ ಗ್ಯಾರಂಟಿ, ಕೋಮುವಾದದ ಗ್ಯಾರಂಟಿ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಗೆ ಲವ್ ಜಿಹಾದ್ ಕಾರಣ ಎಂದು ಅವರ ತಂದೆಯೇ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಗೆ ತುಷ್ಟೀಕರಣದ ರಾಜಕಾರಣದಿಂದ ಮತ ಪಡೆಯುವುದು ಮಾತ್ರ ಮುಖ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ, ಸಮ ಸಮಾಜ ನಿರ್ಮಾಣ ಅವರಿಗೆ ಮುಖ್ಯವಲ್ಲ. ಸಿಬಿಐಗೆ ಈ ಪ್ರಕರಣ ವಹಿಸಿ ಎಂದರೂ ಸಿಐಡಿಗೆ ವಹಿಸಿದ್ದು, ಇದರಿಂದ ನ್ಯಾಯ ಸಿಗುವುದಿಲ್ಲ ಎಂದರು.

ಡಾ.ಬಿ.ಆರ್.ಅ0ಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರಿಗೆ ಅಂತ್ಯಸAಸ್ಕಾರಕ್ಕೂ ಜಾಗವಿಲ್ಲದಂತೆ ಕಾಂಗ್ರೆಸ್ ಮಾಡಿತ್ತು. ಆದರೆ ಪ್ರಧಾನಿ ಮೋದಿ ಅವರ ಐದು ಸ್ಥಳಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿಪಡಿಸಿದರು. ಬಾಬು ಜಗಜೀವನರಾಮ್ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿತ್ತು. ಈಗ ದಲಿತರ ೧೧ ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗೆ ಬಳಸಲಾಗಿದೆ. ಕೇಂದ್ರ ಸರ್ಕಾರದ ಸಚಿವರ ಪೈಕಿ ೨೭ ಒಬಿಸಿ, ೧೨ ಪರಿಶಿಷ್ಟ ಜಾತಿ ಹಾಗೂ ೮ ಪರಿಶಿಷ್ಟ ಪಂಗಡದವರಿದ್ದಾರೆ. ಶೇ.೬೧ ರಷ್ಟು ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್ ನಿಂದಾಗಿ ಜಮ್ಮು-ಕಾಶ್ಮೀರದಲ್ಲಿ ದಲಿತರಿಗೆ ಮೀಸಲಾತಿ ಇರಲಿಲ್ಲ. ದಲಿತರ ಕಾಳಜಿ ಇದ್ದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ.ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕಿತ್ತು ಎಂದರು.

ಮೋದಿ ಸರ್ಕಾರದಿಂದ ದೇಶದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ಸರ್ಕಾರದಿಂದ ಭಯೋತ್ಪಾದನೆ ಹೆಚ್ಚಿದೆ, ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ, ನಕ್ಸಲ್ ಹಾವಳಿ ಶುರುವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ೭ ಲಕ್ಷ ಕೋಟಿ ರೂ. ಗೂ ಅಧಿಕ ಅನುದಾನ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕಾಂಗ್ರೆಸ್ ತೆರಿಗೆ ಅನ್ಯಾಯ ಎಂಬ ನಾಟಕ ಮಾಡುತ್ತಿದೆ ಎಂದು ಡಾ.ಕೆ.ಸುಧಾಕರ್ ದೂರಿದ್ದಾರೆ.

ಖಾಲಿ ಚೊಂಬು ಎಂದು ಹೇಳುವ ಕಾಂಗ್ರೆಸ್ ನ ಸರ್ಕಾರ ಗ್ಯಾರಂಟಿಗಳಿAದಾಗಿ ಅನುದಾನವಿಲ್ಲದೆ ಖಾಲಿ ಚೊಂಬನ್ನೇ ಜನರಿಗೆ ನೀಡಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ರಾಜ್ಯದಲ್ಲಿ ನಡೆದಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅನೇಕ ಪ್ರದೇಶಗಳು ಹಿಂದುಳಿದಿದ್ದು, ಇಲ್ಲಿನ ಅಭಿವೃದ್ಧಿಗೂ ಏನೂ ಮಾಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ೭ ಲಕ್ಷ ಕೋಟಿ ರೂ. ಅನುದಾನ ನೀಡಿದೆ. ಈ ಮೂಲಕ ಕಾಂಗ್ರೆಸ್ ಜನರಿಗೆ ನೀಡಿದ ಚೊಂಬನ್ನು ಅಕ್ಷಯ ಪಾತ್ರೆಯಾಗಿ ಪರಿವರ್ತನೆ ಮಾಡಿದೆ ಎಂದರು.

ನೆರೆ ಮತ್ತು ಬರ ಪರಿಹಾರಕ್ಕೆ ಹಿಂದಿನ ಯುಪಿಎ ಸರ್ಕಾರ ೩,೩೯೩ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರ ಮೂರು ಪಟ್ಟು ಹೆಚ್ಚಾಗಿ ೧೦,೬೧೧ ಕೋಟಿ ರೂ. ನೀಡಿದೆ. ಹಿಂದಿನ ಯುಪಿಎ ಸರ್ಕಾರ ೮೧,೭೯೫ ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದ್ದರೆ, ಮೋದಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಾಗಿ ೩ ಲಕ್ಷ ಕೋಟಿ ರೂ. ನೀಡಿದೆ. ಯುಪಿಎ ಅವಧಿಯಲ್ಲಿ ಅಭಿವೃದ್ಧಿಗಾಗಿ ೬೦,೭೭೯ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರ ನಾಲ್ಕು ಪಟ್ಟು ಹೆಚ್ಚಾಗಿ ೨.೩೬ ಲಕ್ಷ ಕೋಟಿ ರೂ. ನೀಡಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಸುಳ್ಳು ಹೇಳಿದೆ. ಕೇಂದ್ರ ಸರ್ಕಾರ ೪ ಕೋಟಿ ಬಡವರಿಗೆ ಪ್ರತಿ ತಿಂಗಳು ೫ ಕೆಜಿ ಅಕ್ಕಿ ಮತ್ತು ಆಹಾರ ಧಾನ್ಯ ಪೂರೈಸುತ್ತಿದೆ. ಅನ್ನದಾತರ ಸಬಲೀಕರಣಕ್ಕಾಗಿ ಕಿಸಾನ್ ಸಮ್ಮಾನ್ ನಲ್ಲಿ ೫೫ ಲಕ್ಷ ರೈತರಿಗೆ ೨೦,೦೦೦ ಕೋಟಿ ರೂ. ನೀಡಲಾಗಿದೆ. ೫೬ ಲಕ್ಷ ರೈತರಿಗೆ ೧.೩೩ ಲಕ್ಷ ಕೋಟಿ ರೂ. ಬೆಳೆ ವಿಮೆ ಪರಿಹಾರ ನೀಡಲಾಗಿದೆ. ೬,೦೦೦ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ, ೬,೮೦೦ ಕಿ.ಮೀ. ಉದ್ದದ ಗ್ರಾಮೀಣ ರಸ್ತೆ, ೭ ವಿಮಾನ ನಿಲ್ದಾಣಗಳ ನಿರ್ಮಾಣ ಹೀಗೆ ಅನೇಕ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

ಮತದಾರರು ಮತದಾನ ಮಾಡುವುದನ್ನು ಕರ್ತವ್ಯ ಎಂದು ಪರಿಗಣಿಸಬೇಕು. ನಗರಗಳ ಜನರು ಸುಶಿಕ್ಷಿತರಾಗಿದ್ದು, ರಜೆಯಲ್ಲಿ ಎಲ್ಲಿಗೂ ಪ್ರವಾಸ ಹೋಗದೆ ಕಡ್ಡಾಯವಾಗಿ ಮತದಾನ ಮಾಡಬೇಕು. ದೇಶದ ಸುರಕ್ಷತೆಗಾಗಿ, ವಿಕಸಿತ ಭಾರತಕ್ಕಾಗಿ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಡಾ.ಕೆ.ಸುಧಾಕರ್ ಕೋರಿದರು.

ಮಾಜಿ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಚಿತ್ರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್.ಡಿ.ಎ. ಅಭ್ಯರ್ಥಿ ಡಾ.ಕೆ. ಸುಧಾಕರ್ ಪ್ರಚಾರ ನಡೆಸಿದರು.


 rajesh pande