ಹಲವೆಡೆ ಚುರುಕುಗೊಂಡ ಮತದಾರರ ಜಾಗೃತಿ ಕಾರ್ಯಕ್ರಮ
ಬೆಂಗಳೂರು, 28 ಮಾರ್ಚ್ (ಹಿ.ಸ):ಆ್ಯಂಕರ್: ಇಂದು ೨ನೇ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವುದರೊಂದಿಗೆ ಕರ್ನ
ಹಲವೆಡೆ ಚುರುಕುಗೊಂಡ ಮತದಾರರ ಜಾಗೃತಿ ಕಾರ್ಯಕ್ರಮ


ಬೆಂಗಳೂರು, 28 ಮಾರ್ಚ್ (ಹಿ.ಸ):ಆ್ಯಂಕರ್:

ಇಂದು ೨ನೇ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವುದರೊಂದಿಗೆ ಕರ್ನಾಟಕದ ೧೪ ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಲಿದ್ದು, ಈ ಎಲ್ಲ ಮತಕ್ಷೇತ್ರಗಳಲ್ಲಿ ಚುನಾವಣಾ ಅಧಿಕಾರಿಗಳು ಈಗಾಗಲೇ ತಮ್ಮ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ.

ಹಲವೆಡೆ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬೈಕ್ ರ್ಯಾಲಿಗಳು, ಬೀದಿ ನಾಟಕಗಳು, ವಿಶೇಷಚೇತನ ಮತದಾರರ ವಾಹನಗಳ ರ್ಯಾಲಿ, ಬೊಂಬೆ ಪ್ರದರ್ಶನ, ಜನಪದ ಕಾರ್ಯಕ್ರಮಗಳು, ಗೊಂಬೆಯಾಟ, ಮನೆಮನೆಗೆ ಭೇಟಿ, ಅಂಚೆ ಮತ ವ್ಯವಸ್ಥೆಯ ಬಗ್ಗೆ ಮಾಹಿತಿ ವಿನಿಮಯ, ಹಸ್ತಾಕ್ಷರ ಸಂಗ್ರಹ ಅಭಿಯಾನ, ತಪ್ಪದೇ ಮತದಾನ ಮಾಡುವಂತೆ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಬರೆಯುವ ಅಭಿಯಾನ, ಚುನಾವಣಾ ಅಕ್ರಮಗಳನ್ನು ಬಯಲಿಗೆಳೆಯುವ ಅಧಿಕೃತ ವ್ಯವಸ್ಥೆಯಾದ ಸಿ-ವಿಷಲ್ ಆಪ್ ಬಳಕೆಗೆ ಪ್ರೋತ್ಸಾಹ, ವಾಕಥಾನ್ ಮೊದಲಾದ ಚಟುವಟಿಕೆಗಳನ್ನು ಚುನಾವಣಾಧಿಕಾರಿಗಳು ಬಹುತೇಕ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಆಯೋಜಿಸುತ್ತಿದ್ದಾರೆ.

ಈ ನಡುವೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಯಳಂದೂರಿನಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಎಸ್. ಉಮೇಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಅಭ್ಯರ್ಥಿಗಳ ಬಗ್ಗೆ ವಿವರಗಳನ್ನು ಪರಿಶೀಲಿಸಿ ಸೂಕ್ತವಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದರು.

ಚಾಮರಾಜನಗರದಲ್ಲಿ ನಡೆದ ಮತ್ತೊಂದು ಜಾಗೃತಿ ಕಾರ್ಯಕ್ರಮದಲ್ಲಿ ಯುವ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಉದ್ದೇಶದಿಂದ ಮದುವೆ ಆಹ್ವಾನ ಪತ್ರದ ಮಾದರಿಯಲ್ಲಿ ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande