ನವದೆಹಲ, 09 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೇಶಾದ್ಯಂತ ಇಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಯೋಜಿಸಲಾಗಿದೆ. ಮಕ್ಕಳು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಒಂದೆಡೆಯಾದರೆ .ಮಕ್ಕಳ ದೇಹದಲ್ಲಿರುವ ಜಂತುಹುಳುಗಳು ಆಹಾರ ಕಬಳಿಸಿ ಮತ್ತೊಂದೆಡೆ ಮಕ್ಕಳನ್ನು ಅನಾರೋಗ್ಯಕ್ಕೆ ಸಿಲುಕಿಸುತ್ತಿವೆ.ಜಂತುಹುಳು ಬಾಧೆಯಿಂದ ಅಪೌಷ್ಟಿಕತೆ, ರಕ್ತ ಹೀನತೆ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ.
ಜಂತುಹುಳು ಸೋಂಕಿನ ಲಕ್ಷಣಗಳು ಸೋಂಕಿನ ಪ್ರಕಾರ ಮತ್ತು ತೀವ್ರತೆಯ ಆಧಾರದಲ್ಲಿ ಬದಲಾಗುತ್ತವೆ. ಈ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಹೊಟ್ಟೆ ನೋವು, ಅಜೀರ್ಣ, ತೂಕ ಇಳಿಕೆ ಮತ್ತು ದೈಹಿಕ ದುರ್ಬಲತೆಗಳು ಸೇರಿವೆ. ಜೊತೆಗೆ ವಾಕರಿಕೆ ಮತ್ತು ವಾಂತಿ ಅಥವಾ ಅತಿಸಾರ, ಆಯಾಸ, ನಿರ್ಜಲೀಕರಣ, ಆಗಾಗ್ಗೆ ಮೂತ್ರ ವಿಸರ್ಜನೆ, ಹೊಟ್ಟೆಯ ಉಬ್ಬುವಿಕೆ, ಚರ್ಮ ಕೆಂಪಾಗಿ ಕಿರಿಕಿರಿ, ತುರಿಕೆ ಮತ್ತು ಮಲದೊಂದಿಗೆ ರಕ್ತ ಹೋಗುವ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ರಾತ್ರಿ ಪದೇ ಪದೇ ಎಚ್ಚರವಾಗುವುದು, ಗಾಢವಾಗಿ ನಿದ್ರೆ ಬಾರದಿರುವುದು ಜಂತುಹುಳುಗಳು ಇರುವ ಮತ್ತೊಂದು ಲಕ್ಷಣ.
ಮಕ್ಕಳಲ್ಲಿ ಪದೇ ಪದೇ ಹೊಟ್ಟೆ ನೋವು, ಮಲಬದ್ಧತೆ, ಹಸಿವಿಲ್ಲದಿರುವುದು ಅಥವಾ ಅಜೀರ್ಣದಂಥ ಸಮಸ್ಯೆಗಳು ಕಂಡುಬಂದರೆ ವೈದ್ಯರು ಮೊದಲು ಜಂತು ಹುಳು ನಿರ್ಮೂಲನೆಗೆ ಮಾತ್ರೆ/ಔಷಧಿ ಕೊಡುತ್ತಾರೆ. ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆಗೊಳಿಸಲು ಹಾಗೂ ಜಂತುಹುಳುಗಳ ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಆಲ್ ಬೆಂಡಾಜೋಲ್ ಎಂಬ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
೧ ರಿಂದ ೧೯ ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಜಂತುಹುಳುವಿನ ಬಾಧೆಯನ್ನು ನಿವಾರಿಸುವ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಇದಕ್ಕಾಗಿ ಅಂಗನವಾಡಿಗಳಿಂದ ಹಿಡಿದು ಪ್ರಥಮ ವರ್ಷದ ಪದವಿ ಕಾಲೇಜುಗಳವರೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಅಡ್ಡಿ ಉಂಟುಮಾಡುವ ಜಂತುಹುಳಗಳ ನಿವಾರಣೆಗೆ ಆರು ತಿಂಗಳಿಗೊಮ್ಮೆ ಈ ಮಾತ್ರೆಗಳನ್ನು ನೀಡಲಾಗುತ್ತದೆ.
ಜಂತು ಹುಳು ನಿರ್ಮೂಲನೆಯಿಂದಾಗಿ ಮಕ್ಕಳು ಸೇವನೆ ಮಾಡುವ ಪೌಷ್ಠಿಕ ಆಹಾರ ಮಕ್ಕಳ ದೇಹಕ್ಕೆ ಸರಿಯಾದ ರೀತಿಯಲ್ಲಿ ಲಭ್ಯವಾಗುತ್ತದೆ. ಜಂತುಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೆ, ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿನ ರಕ್ತಹೀನತೆ ಸಮಸ್ಯೆ ನಿವಾರಣೆಗಾಗಿ ಸರ್ಕಾರ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ 2 ಬಾರಿ ಜಂತು ಹುಳು ನಿವಾರಣೆ ಮಾತ್ರೆಯನ್ನು ಉಚಿತವಾಗಿ ನೀಡುತ್ತಿದೆ’.
ಮಕ್ಕಳಲ್ಲಿ ಹುಳುವಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸರ್ಕಾರ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ಶಾಲೆಗಳಲ್ಲಿ ನೀಡುತ್ತಿವೆ. ಜೊತೆಗೆ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್