ಬೆಂಗಳೂರು, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕ್ರಿಸ್‌ಮಸ್ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸುವ ಕ್ರಿಸ್‌ಮಸ್ ಎಂದಾಕ್ಷಣ ನಮಗೆ ನೆನಪಾಗುವುದು ಚರ್ಚ್, ಏಸುಕ್ರಿಸ್ತ, ಕ್ರಿಸ್‌ಮಸ್ ಮರ, ಕೇಕ್ ಮತ್ತು ಆಚರಣೆ. ಆದರೆ, ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ? ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ಒಂದು ವರದಿ.
ಡಿಸೆಂಬರ್ ಬಂತೆಂದರೆ ಸಾಕು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹುರುಪು ಎಲ್ಲರಲ್ಲೂ ಮನೆಮಾಡಿರುತ್ತದೆ. ಕ್ರಿಶ್ಚಿಯನ್ ಬಾಂಧವರು ಒಗ್ಗೂಡಿ ಆಚರಿಸುವ ಕ್ರಿಸ್‌ಮಸ್ ವಿಶ್ವಕ್ಕೆ ಸಮಾನತೆ ಹಾಗೂ ಸಾರ್ಥಕತೆಯ ಪಾಠವನ್ನು ಮಾಡುತ್ತದೆ. ದೇವ ಪುರುಷರಾದ ಯೇಸು ಕ್ರಿಸ್ತನು ಭೂಮಿಯಲ್ಲಿರುವ ಮಾನವರ ಕಲ್ಯಾಣಕ್ಕಾಗಿ ಡಿಸೆಂಬರ್ 25 ರಂದು ಭೂಮಿಯಲ್ಲಿ ಅವತರಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಆಚರಿಸಲಾಗುತ್ತದೆ.
ಕ್ರಿಸ್‌ಮಸ್‌ನ ಇತಿಹಾಸವು ಕೇವಲ ಕೆಲವು ವರ್ಷಗಳಷ್ಟು ಹಳೆಯದಲ್ಲ, ಆದರೆ ಈ ಆಚರಣೆಯು ಹಲವು ಶತಮಾನಗಳ ಹಿಂದಿನದು. ಕ್ರಿಸ್‌ಮಸ್ ಅನ್ನು ಮೊದಲು ರೋಮ್ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿ.25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆಗ ರೋಮ್ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ದೇವರಾಗಿ ಪರಿಗಣಿಸುತ್ತಿದ್ದರು. ಸೂರ್ಯ ದೇವನನ್ನೇ ಪೂಜಿಸುತ್ತಿದ್ದರು. ಕಾಲಾನಂತರ ಕ್ರಿ.ಶ.330ರ ಹೊತ್ತಿಗೆ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಿತು. ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆಯೂ ಹೆಚ್ಚಿತು. ಬಳಿಕ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ‘ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರ’ ಎಂದು ಪರಿಗಣಿಸಿದರು. ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯ ಆರಂಭವಾಯಿತು. ಹೀಗಾಗಿ, ಡಿ.25 ರಂದು ಕ್ರಿಸ್‌ಮಸ್ ಹಬ್ಬ ಆಚರಿಸುವ ಪರಿಪಾಠ ಶುರುವಾಯಿತು.
ಭಾರತೀಯರಿಗೆ ‘ಯುಗಾದಿ’ಯನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಆದರೆ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬವು ಹೊಸ ವರ್ಷವಾಗಿದೆ. ಈ ದಿನವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯವೆಂದು ಪರಿಗಣಿಸುತ್ತಾರೆ. ಕ್ರಿಸ್ತ ಜನಿಸಿದ ದಿನವೆಂದು ಕ್ರೈಸ್ತರು ಡಿ.25 ರಂದು ಕ್ರಿಸ್‌ಮಸ್ ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದ ಜನರಿಗೆ ಇದು ಸಾಂಪ್ರದಾಯಿಕ ಹಬ್ಬ.
ಡಿಸೆಂಬರ್ 24 ರ ಮಧ್ಯರಾತ್ರಿ, ಜನರು ಚರ್ಚ್‌ಗೆ ಹೋಗುತ್ತಾರೆ ಮತ್ತು ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ತಮ್ಮ ದೇವನಾದ ಯೇಸು ಕ್ರಿಸ್ತನನ್ನು ಈ ದಿನ ನೆನೆಯುತ್ತಾರೆ.
ಈ ಹಬ್ಬದ ದಿನ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್‌ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ನೀಡುವ ಸಾಂತಾ ಕ್ಲಾಸ್ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ.ಸಾಂತಾ ಕ್ಲಾಸ್ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಆತ ದೇವದೂತ. ಕ್ರಿಸ್ಮಸ್ ಹಬ್ಬದಂದು ಮೇಲಿನಿಂದ ಇಳಿದು ಬಂದು ಉಡುಗೊರೆ ನೀಡಿ ಮರಳಿ ಹೋಗುತ್ತಾನೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಆದರೆ ನಿಜವಾದ ಸಾಂತಾ ಕ್ಲಾಸನ ಕಥೆ ಬೇರೆಯೇ ಇದೆ.
ಪರೋಪಕಾರಿ ಸೇಂಟ್ ನಿಕೋಲಸ್ನೊಂದಿಗೆ ಈ ಸಂಪ್ರದಾಯ ಬೇರೂರಿದೆ. ಉದಾರತೆ ಮತ್ತು ರಕ್ಷಣೆಯ ವ್ಯಕ್ತಿಯಾಗಿ ಸಾಂತಾ ಕ್ಲಾಸ್ ಹೊರಹೊಮ್ಮಿದ್ದಾರೆ. ಸೇಂಟ್ ನಿಕೋಲಸ್ ಕ್ರಿ.ಶ. 280 ರ ಸುಮಾರಿಗೆ ಟರ್ಕಿಯಲ್ಲಿ ಜನಿಸಿದರು. ಅವರು ಆರಂಭದಲ್ಲಿ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಬಿಷಪ್ ಆಗಿದ್ದರು, ಅವರು ತಮ್ಮ ನಂಬಿಕೆಗಳಿಗಾಗಿ ಕಿರುಕುಳಕ್ಕೊಳಗಾದವರು ಮತ್ತು ಸೆರೆವಾಸ ಕೂಡಾ ಅನುಭವಿಸಿದರು. ಅವರು ತಮ್ಮ ಪಿತ್ರಾರ್ಜಿತ ಸಂಪತ್ತನ್ನು ಬಿಟ್ಟುಕೊಟ್ಟು ಹಳ್ಳಿಗಾಡಿನಲ್ಲಿ ಸುತ್ತಾಡಿದರು, ಬಡವರಿಗೆ ಮತ್ತು ರೋಗಿಗಳಿಗೆ ಸಹಾಯ ಮಾಡಿದರು, ಮಕ್ಕಳ ಮತ್ತು ನಾವಿಕರ ರಕ್ಷಕ ಎಂಬ ಬಿರುದನ್ನು ಸಹ ಪಡೆದುಕೊಂಡರು.
ನಿಕೋಲಸ್ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಪರಂಪರೆಯನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಹೀಗೆ ಬಿಳಿಯ ಗಡ್ಡ, ಕೆಂಪು ಬಣ್ಣದ ಉಡುಗೆಯೊಂದಿಗೆ ಗಿಫ್ಟ್ ನೀಡುವ ಹಿರಿಯ ವ್ಯಕ್ತಿಯನ್ನು ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್