ನವದೆಹಲಿ, 04 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತಿದೆ. ಭಾರತೀಯ ನೌಕಾಪಡೆಯ ಸಾಧನೆಗಳು ಮತ್ತು ಪಾತ್ರವನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ ೪ ರಂದು ಈ ದಿನವನ್ನು ಆಚರಿಸಲಾಗುತ್ತದೆ.
೧೯೭೧ ರಲ್ಲಿ ಇದೇ ದಿನದಂದು, ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ, ಭಾರತೀಯ ನೌಕಾಪಡೆಯು ಪಿಎನ್‌ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿ, ನೂರಾರು ಪಾಕಿಸ್ತಾನಿ ನೌಕಾಪಡೆಯ ಸಿಬ್ಬಂದಿಯನ್ನು ಹತ್ಯೆಗೈದಿತ್ತು.
ಭಾರತದ ನೌಕಾಪಡೆಯು ದೇಶದ ಕರಾವಳಿ ತೀರ, ಸಮುದ್ರ ಗಡಿಯನ್ನು ಶತ್ರುಗಳಿಂದ ರಕ್ಷಣೆ ಮಾಡುವುದರ ಜೊತೆಗೆ ಬೇರೆ ದೇಶಗಳ ಬಂದರು ಭೇಟಿ, ಜಂಟಿ ಕವಾಯತು, ವಿಪತ್ತು ಪರಿಹಾರ ಮುಂತಾದ ರೀತಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡುತ್ತದೆ.
ಮೊದಲು ನೌಕಪಡೆಯನ್ನು ರಾಯಲ್ ಇಂಡಿಯನ್ ನೇವಿ ಎಂದು ಕರೆಯಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು 1612ರಲ್ಲಿ ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ನೌಕಾ ಶಾಖೆಯನ್ನು ಸ್ಥಾಪಿಸಿತ್ತು. ಸ್ವಾತಂತ್ರ್ಯ ನಂತರ 1950ರ ಜನವರಿ 26 ರಂದು ಭಾರತೀಯ ನೌಕಾಪಡೆ ಎಂದು ಮರುನಾಮಕರಣ ಮಾಡಲಾಯಿತು
ಈ ವರ್ಷ ನೌಕಪಡೆ ದಿನ ಅಂಗವಾಗಿ ಒಡಿಶಾದ ಪುರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ನೌಕಾಬಲದ ಶಕ್ತಿ ಪ್ರದರ್ಶನಗೊಳ್ಳಲಿದೆ. ನೌಕಾಪಡೆಯ ಕಾರ್ಯಾಚರಣೆ ಪ್ರಾತ್ಯಕ್ಷಿಕೆಯಲ್ಲಿ ಮಿಗ್-29 ಯುದ್ಧ ವಿಮಾನ, ಎಲ್‌ಸಿಎ ಸೇರಿದಂತೆ 40 ವಿಮಾನಗಳು ಮತ್ತು 25 ಯುದ್ಧನೌಕೆಗಳು ಶಕ್ತಿ ಪ್ರದರ್ಶನ ನಡೆಸಲಿವೆ. ಇದೇ ಮೊದಲ ಬಾರಿ ಒಡಿಶಾದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಆಕರ್ಷಕ ಪರೇಡ್ ನಡೆಯಲಿದೆ.
ಆಚರಣೆ ಹೇಗೆ?
ಯುದ್ಧನೌಕೆಗಳು ಮತ್ತು ವಿಮಾನಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗುತ್ತದೆ. ಕಾರ್ಯಕ್ರಮದಲ್ಲಿ ಯುದ್ಧವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತವೆ. ಅಂದು ಸಶಸ್ತ್ರ ಪಡೆಯ ಮುಖ್ಯಸ್ಥರು ರಾಜಧಾನಿ ದೆಹಲಿಯಲ್ಲಿರುವ ನ್ಯಾಷನಲ್ ವಾರ್ ಮೆಮೊರಿಯಲ್‌ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಹೀಗೆ ನೌಕಾಪಡೆ ಯ ವತಿಯಿಂದ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್