ಮ್ಯಾಗ್ಡೆಬರ್ಗ್, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪೂರ್ವ ಜರ್ಮನಿಯ ಮ್ಯಾಗ್ಡೆಬರ್ಗ್ ನಗರದಲ್ಲಿ ಕ್ರಿಸ್ ಮಸ್ ಮಾರುಕಟ್ಟೆಗೆ ವೇಗದಿಂದ ನುಗ್ಗಿದ ಕಾರ್ ಅಡಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ್ದು , 60 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದು ಶಂಕಿತ ದಾಳಿಯಾಗಿದೆ ಎಂದು ಹೇಳಲಾಗಿದೆ
ಕ್ರಿಸ್‌ಮಸ್ ರಜೆ ಸಂಭ್ರಮಕ್ಕಾಗಿ ಮ್ಯಾಗ್ಡೆಬರ್ಗ್ ನಗರದ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು. ಇಂತಹ ಜನನಿಬಿಡ ಮಾರುಕಟ್ಟೆಗೆ ಕಾರು ನುಗ್ಗಿ ಅನಾಹುತಕ್ಕೆ ಕಾರಣವಾಗಿದೆ.ಶತಮಾನಗಳ- ಹಳೆಯ ಜರ್ಮನ್ ಸಂಪ್ರದಾಯದ ಭಾಗವಾಗಿರುವ ಹಬ್ಬದ ಕಾರ್ಯಕ್ರಮವನ್ನು ಈ ದಾಳಿ ಹಾಳುಗೆಡವಿದೆ.
ಜರ್ಮನ್ ಕ್ರಿಸ್‌ಮಸ್ ಮಾರುಕಟ್ಟೆ ದಾಳಿಯ ಶಂಕಿತ ಸೌದಿ ಅರೇಬಿಯಾದ 50 ವರ್ಷದ ವ್ಯಕ್ತಿ ಎನ್ನಲಾಗಿದ್ದು, ಮ್ಯಾಗ್ಡೆಬರ್ಗ್ ಕ್ಲಿನಿಕ್‌ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಪ್ರಕಾರ, ಈತ ಬಿಎಂಡಬ್ಲ್ಯು ಚಲಾಯಿಸುತ್ತಿದ್ದರು ಮತ್ತು ಕಾರಿನಲ್ಲಿ ಸ್ಫೋಟಕಗಳನ್ನು ಹೊಂದಿದ್ದ. ಈತ ಸುಮಾರು ಎರಡು ದಶಕಗಳಿಂದ ಜರ್ಮನಿಯಲ್ಲಿ ವಾಸಿಸುತ್ತಿದ್ದು, ಜರ್ಮನಿಯ ಕಾಯಂ ನಿವಾಸಿ ಎಂದು ವರದಿಯಾಗಿದೆ.
ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೇಸರ್, ದಾಳಿಯ ಬಗ್ಗೆ ಮಾತನಾಡಿ, ದೇಶದ ಕ್ರಿಸ್‌ಮಸ್ ಮಾರುಕಟ್ಟೆಗಳಿಗೆ ಯಾವುದೇ ಅಪಾಯ ಇಲ್ಲ. ಆದರೂ ಜನರು ಜಾಗರೂಕರಾಗಿರಬೇಕು ಎಂದು ಕರೆ ನೀಡಿದ್ದಾರೆ. ಇದೊಂದು ಕರಾಳ ದಿನವಾಗಿದೆ. ಇದರಿಂದ ನಾವು ಭಯಭೀತರಾಗಿದ್ದೇವೆ ಎಂದರು.
ಬ್ರಿಟನ್ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ದಾಳಿಯನ್ನು ಖಂಡಿಸಿದರು. ‘ ಮ್ಯಾಗ್ಡೆಬರ್ಗ್‌ನಲ್ಲಿ ನಡೆದ ಭೀಕರ ದಾಳಿಯಿಂದ ನಾನು ಗಾಬರಿಗೊಂಡಿದ್ದೇನೆ. ನಾವು ಜರ್ಮನಿಯ ಜನರೊಂದಿಗೆ ನಿಲ್ಲುತ್ತೇವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್