ಬಳ್ಳಾರಿ, 04 ನವೆಂಬರ್ (ಹಿ.ಸ.) :
ಆ್ಯಂಕರ್ : ತೊಗಲು ಗೊಂಬೆ ಆಟದ ಕಲೆಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಸಂಘ ಸಂಸ್ಥೆಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದೊಂದಿಗೆ ಈ ಕಲೆಯನ್ನು ಪ್ರದರ್ಶಿಸುತ್ತಾ ತಮ್ಮ ಇಡೀ ಜೀವನವನ್ನೇ ತೊಗಲುಗೊಂಬೆ ಕಲೆಗಾಗಿ ಮುಡುಪಾಗಿ ಇಟ್ಟಂತಹ ಜಿಲ್ಲೆಯ ತೊಗಲು ಗೊಂಬೆ ಕಲಾವಿದರಾದ ಹುಲಿಗೆಮ್ಮ ಇವರಿಗೆ ಈ ಸಾಲಿನ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಲಭಿಸಿದೆ.
ಇವರು ಗಡಿನಾಡಿನ ಲಕ್ಷ್ಮಿಪುರ ಗ್ರಾಮದಲ್ಲಿ ಜನಿಸಿರುತ್ತಾರೆ. ಇವರ ತಂದೆ ಹೂಲೆಪ್ಪ ಇವರು ತೊಗಲುಗೊಂಬೆ ಕಲಾವಿದರಾದ್ದರಿಂದ ಇವರ ಪ್ರಭಾವ ಸಹಜವಾಗಿ ಹುಲಿಗೆಮ್ಮ ಅವರ ಮೇಲೆ ಪರಿಣಾಮ ಬೀರಿ ಅವರು ಸಹ ತೊಗಲುಗೊಂಬೆ ಆಟದ ಪ್ರದರ್ಶನವನ್ನು ಒಂದು ಕಲೆಯನ್ನಾಗಿ ತಮ್ಮ ಜೀವನದಲ್ಲಿ ರೂಡಿಸಿಕೊಂಡು ತಾವು ಸಹ ಈ ಕಲೆಯನ್ನು ಪ್ರದರ್ಶನ ಮಾಡುತ್ತಾ ಬಂದಿರುತ್ತಾರೆ.
ಹಲವಾರು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ವಾಸ ಮಾಡಿಕೊಂಡು ಬಳ್ಳಾರಿ ಜಿಲ್ಲೆಯಲ್ಲದೇ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಸಹ ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು ತೊಗಲು ಗೊಂಬೆಯಾಟ ಪ್ರದರ್ಶನ ಮಾಡುತ್ತಾ ಬಂದಿರುತ್ತಾರೆ. ಪ್ರಸ್ತುತ ತೊಗಲು ಗೊಂಬೆಯಾಟವನ್ನೇ ತನ್ನ ಜೀವನದ ಆಧಾರವನ್ನಾಗಿಸಿಕೊಂಡಿದ್ದಾರೆ.
ಇವರು ಜನಪದ ಉತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಮಹಿಳಾ ಉತ್ಸವಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಪ್ರಾಯೋಜಕತ್ವದಲ್ಲಿ ಹಲವಾರು ತೊಗಲುಗೊಂಬೆ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಷ್ಟೇ ಅಲ್ಲದೆ ಸಂಪೂರ್ಣ ರಾಮಾಯಣವನ್ನು ಮೂರು ಕಥಾ ಭಾಗವನ್ನಾಗಿ ಮಾಡಿಕೊಂಡು ದಕ್ಷಿಣಾದಿ ಮತ್ತು ಉತ್ತರಾದಿ ಹಾಡುಗಳನ್ನು ಸುಲಲಿತವಾಗಿ ಹಾಡುತ್ತಾರೆ.
ಇಂತಹ ವಿಶಿಷ್ಠ ಕಲೆಯನ್ನು ಪ್ರದರ್ಶಿಸುತ್ತಿರುವುದು ನನಗೂ ನನ್ನ ಕುಟುಂಬಕ್ಕೂ ಅತ್ಯಂತ ಸಂತೋಷದವಿಷಯವಾಗಿದೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ.
ಇದರ ಫಲವಾಗಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡ ಮಾಡುವ ಈ ಸಾಲಿನ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್