ಬೆಂಗಳೂರು, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಚಲನಚಿತ್ರಗಳನ್ನು ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಕನ್ನಡ ಚಲನಚಿತ್ರಗಳಿಗಾಗಿ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸುವ ಪ್ರಯತ್ನಗಳೂ ಸಹ ನಡೆದಿವೆ. ಇದರ ನಡುವೆ ಈಗ ನಿರ್ಮಾಣ ಸಂಸ್ಥೆಯೊಂದು ‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಮಾಡಿದೆ.
ಕನ್ನಡ ಚಲನಚಿತ್ರಗಳನ್ನು ಒಟಿಟಿಗಳು ಖರೀದಿ ಮಾಡುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಕನ್ನಡ ಚಲನಚಿತ್ರಗಳನ್ನು ಒಟಿಟಿಗಳು ತಾತ್ಸಾರದಿಂದ ನೋಡುತ್ತವೆ. ಒಟಿಟಿಗಳಿಗೆ ಹೆಚ್ಚು ಚಂದಾದಾರರು ಇರುವುದು ಕರ್ನಾಟಕದಲ್ಲಿಯೇ ಆದರೆ ಅವರು ಕನ್ನಡ ಚಲನಚಿತ್ರಗಳನ್ನು ಮಾತ್ರ ಖರೀದಿ ಮಾಡಿ ಪ್ರದರ್ಶನ ಮಾಡುವುದಿಲ್ಲ ಎಂಬ ದೂರು ಇದೆ. ಕನ್ನಡಿಗರಿಗೆ ಕನ್ನಡದ್ದೇ ಆದ ಒಟಿಟಿ ನಿರ್ಮಾಣ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಕೆಲವು ಪ್ರಯತ್ನಗಳು ಈ ನಿಟ್ಟಿನಲ್ಲಿ ಆಗಿವೆಯಾದರೂ ದೊಡ್ಡ ಯಶಸ್ಸು ದೊರೆತಿಲ್ಲ. ಇದೀಗ ಕನ್ನಡದ್ದೇ ಆದ ಹೊಸ ಒಟಿಟಿ ವೇದಿಕೆಯೊಂದು ಬಿಡುಗಡೆ ಆಗಿದೆ.
‘ಒಟಿಟಿ ಪ್ಲೇಯರ್’ ಹೆಸರಿನ ಹೊಸ ಒಟಿಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಆಪ್ ಮಾದರಿಯ ಒಟಿಟಿ ಅಲ್ಲ, ಬದಲಿಗೆ ವೆಬ್ಸೈಟ್ ಆಗಿದೆ. ಅತ್ಯಂತ ಕಡಿಮೆ ಮೊತ್ತದಲ್ಲಿ ವೆಬ್ಸೈಟ್ಗೆ ಹೋಗಿ ಚಲನಚಿತ್ರ ವೀಕ್ಷಣೆ ಮಾಡಬಹುದಾಗಿದೆ. ಹಾರ್ಲೀ ಎಂಟರ್ ಟೈನ್ ಮೆಂಟ್ ಮೀಡಿಯಾ ಸಂಸ್ಥೆ ಅಡಿಯಲ್ಲಿ ಗೀತಾ ಕೃಷ್ಣನ್ ರಾವ್ ಹಾಗೂ ಮುರಳಿರಾವ್ ಅವರು ಈ ವೆಬ್ ಸೈಟ್ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ, ಜಾಹೀರಾತು ಮುಕ್ತವಾಗಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ವೀಕ್ಷಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್