ವಿದ್ಯಾರ್ಥಿಗಳಿಂದ ಚಿನ್ಮಯ ವಿದ್ಯಾಲಯದಲ್ಲಿ ಮಾತೃಪೂಜೆ
ವಿದ್ಯಾರ್ಥಿಗಳಿಂದ ಚಿನ್ಮಯ ವಿದ್ಯಾಲಯದಲ್ಲಿ ಮಾತೃಪೂಜೆ
ಚಿತ್ರ - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ನಡೆದ ಮಾತೃಪೂಜೆಯಲ್ಲಿ ತಾಯಂದಿರು ಭಾಗವಹಿಸಿದ್ದು, ಮಕ್ಕಳು ಶ್ರದ್ಧಾಭಕ್ತಿಯಿಂದ ಪಾದಪೂಜೆ ನಡೆಸಿ, ಆಶೀರ್ವಾದ ಪಡೆದರು.


ಕೋಲಾರ, ೨೨ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತಾಯಿಗಿಂತ ಮಿಗಿಲಾದ ದೇವರಿರಲು ಸಾಧ್ಯವೇ ಇಲ್ಲ, ಅಂತಹ ಮಾತೃಮೂರ್ತಿಯನ್ನು ಪೂಜಿಸಿದರೆ ನಿಮ್ಮ ಇಷ್ಟಾರ್ಥ ಸಿದ್ದಿಯಾಗುವುದರ ಜತೆಗೆ ಮುಕ್ಕೋಡಿ ದೇವತೆಗಳ ಆಶೀರ್ವಾದವೂ ಲಭಿಸುತ್ತದೆ ಮಾತೃಪೂಜೆಯ ಮೂಲಕ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ತಾಯಂದಿರ ಸಹಕಾರ ಸಿಗಲಿದೆ ಎಂದು ಚೊಕ್ಕಹಳ್ಳಿ ಚಿನ್ಮಯ ಸಾಂಧೀಪನಿ ಅಶ್ರಮದ ದತ್ತಪಾದಾನಂದ ಶ್ರೀಗಳು ಕರೆ ನೀಡಿದರು.

ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾತೃಪೂಜೆ ಕಾರ್ಯಕ್ರಮದಲ್ಲಿ ಅವರು ತಾಯಂದಿರು,ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಾತೃಪೂಜೆ ಮಕ್ಕಳ ಮನಸ್ಸಿನಲ್ಲಿ ತಾಯಿಯ ಮಹತ್ವವನ್ನು ತಿಳಿಸಿಕೊಡುವುದರ ಜತೆಗೆ ತಾಯಂದಿರು ಶಾಲೆಯಲ್ಲಿ ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ತಿಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಕಲಿಯುವುದರ ಜತೆಗೆ ಮನೆಯಲ್ಲಿ ಮಕ್ಕಳ ನಡವಳಿಕೆ, ಕಲಿಕೆ ಅತಿ ಮುಖ್ಯವಾಗಿದೆ, ಈ ಹಿನ್ನಲೆಯಲ್ಲಿ ಮಾತೃಪೂಜೆ ಮೂಲಕ ತಾಯಂದಿರನ್ನು ಕರೆಸಿ ಅವರಿಗೆ ಅರಿವು ಮೂಡಿಸುವುದರಿಂದ ಮನೆಯಲ್ಲಿ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಆಸಕ್ತಿ ವಹಿಸಲು ಪ್ರೇರಣೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಣದ, ಮಾತನಾಡದ ದೇವರಿಗೆ ಪೂಜಿಸುತ್ತೇವೆ ಆದರೆ ನಮ್ಮ ಕಣ್ಣ ಮುಂದೆಯೇ ನಮ್ಮ ಆಸೆಗಳನ್ನು ಈಡೇರಿಸಿ ನಮಗಾಗಿ ದುಡಿಯುವ, ಚಿಂತಿಸುವ ಮಾತನಾಡುವ ಜೀವಂತ ದೈವ ತಾಯಿಗೆ ಗೌರವ ನೀಡುವುದನ್ನು ಮರೆಯುತ್ತೇವೆ ಇದು ಸರಿಯಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪಿ.ಚಂದ್ರಪ್ರಕಾಶ್ ಮಾತನಾಡಿ, ತಾಯಿಯನ್ನು ಸಕಲ ಇಷ್ಟಾರ್ಥ ಪೂರೈಸುವ ನವದುರ್ಗೆಯರಿಗೆ ಹೋಲಿಸಿ, ನಮ್ಮ ಸಂಸ್ಕೃತಿ, ಸಂಸ್ಕಾರದ ಕುರಿತು ಮಕ್ಕಳಿಗೆ ತಿಳಿಸುವ ಪ್ರಯತ್ನ ಸ್ವಾಗತಾರ್ಹವಾಗಿದೆ, ಮಾತೃಪೂಜೆಯ ಮೂಲಕ ಶಾಲೆಗೆ ತಾಯಂದಿರನ್ನು ಕರೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ತಿಳಿಸುವ ಮೂಲಕ ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆ ಇದು ಸಹಕಾರಿಯಾಗಲಿ ಎಂದು ಹಾರೈಸಿದರು.

ಹಿಂದೂ ಧರ್ಮದಲ್ಲಿ ತಾಯಿಗೆ ಮಿಗಿಲಾದ ಸ್ಥಾನವಿದೆ, ತಾಯಿಗಿಂತ ದೊಡ್ಡ ದೇವರಿಲ್ಲ ಎಂಬುದನ್ನು ನಮ್ಮ ಸಂಸ್ಕಾರ ನಮಗೆ ತಿಳಿಸಿಕೊಟ್ಟಿದೆ ಎಂದ ಅವರು, ಶಿಕ್ಷಣದ ಜತೆಗೆ ಸಂಸ್ಕಾರವೂ ಇದ್ದರೆ ಮಾತ್ರ ನಿಮ್ಮ ಕಲಿಕಾ ಸಾಧನೆ ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ಜಯರಾಜ್ ಮಾತನಾಡಿ, ತಾಯಂದಿರಿಗೆ ಪೂಜೆ ಸಲ್ಲಿಸುವ ಮೂಲಕ ಮಕ್ಕಳಲ್ಲಿ ತಾಯಿಯ ಸ್ಥಾನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಲಾಗಿದೆ, ಹೆತ್ತವರ ಆಶಯ ಈಡೇರಿಸುವ ಹಾದಿಯಲ್ಲಿ ಮಕ್ಕಳು ಸಾಗಬೇಕು, ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಹಿರಿಯ ಶಿಕ್ಷಕ ನರಸಿಂಹಪ್ರಸಾದ್, ಸಂಸ್ಕಾರ ಮರೆತು ಹೆತ್ತವರನ್ನು ವೃದ್ದಾಶ್ರಮಗಳಿಗೆ ಸೇರಿಸುವ ಕಾರ್ಯ ನಡೆಯುತ್ತಿರುವುದು ವಿಷಾದದ ಸಂಗತಿ, ಮಕ್ಕಳು ಹೆತ್ತವರ ಮಾರ್ಗದರ್ಶನ ಪಡೆಯಲು ಅವರ ನೆರಳಿನಲ್ಲೇ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ಮಕ್ಕಳಿಗೆ ಶಾಸ್ತ್ರೋಕ್ತವಾಗಿ ತಾಯಿಯ ಪಾದಪೂಜೆ ಮಾಡುವ ವಿಧಾನ ತಿಳಿಸಿಕೊಟ್ಟು, ಪಾದ ತೊಳೆದು, ಕುಂಕುಮಾರ್ಚನೆ, ಪುಷ್ಪಾರ್ಚನೆ ನಡೆಸಿದ ಮಕ್ಕಳು ತಾಯಂದಿರ ಪಾದಕ್ಕೆ ಮಂಗಳಾರತಿ ಬೆಳಗಿ ಅವರ ಪಾದಕ್ಕೆರಗಿ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನರಸಿಂಹಪ್ರಸಾದ್, ಹೇಮಾ, ಲಲಿತಾ,ಸುಲೋಚನ, ಗೀತಾ, ರತ್ನಮ್ಮ, ಜಯತಿ, ಭವಾನಿ, ರಂಜಿತಾ, ಲಾವಣ್ಯ ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದು, ಮಕ್ಕಳ ತಾಯಂದಿರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.

ಚಿತ್ರ - ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ನಡೆದ ಮಾತೃಪೂಜೆಯಲ್ಲಿ ತಾಯಂದಿರು ಭಾಗವಹಿಸಿದ್ದು, ಮಕ್ಕಳು ಶ್ರದ್ಧಾಭಕ್ತಿಯಿಂದ ಪಾದಪೂಜೆ ನಡೆಸಿ, ಆಶೀರ್ವಾದ ಪಡೆದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande