ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದೆ ಹಳೆಯ ಮಾಲೂರು ರಸ್ತೆ
ಮಳೆಯಿಂದಾಗಿ ಕೋಲಾರ ತಾಲ್ಲೂಕು ಬೆಳ್ಳೂರು ರಸ್ತೆ ಸಂಪೂರ್ಣ ಹಾನಿ
ಚಿತ್ರ - ಕೋಲಾರ ತಾಲ್ಲೂಕು ನರಸಾಪುರ ಬಳಿಯ ಬೆಳ್ಳೂರು ರಸ್ತೆ ಮಳೆಯಿಂದಾಗಿ ಹಾನಿಯಾಗಿರುವುದು.


ಕೋಲಾರ, ೨೨ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರಿನ ಬಳಿ ಕೆ ಸಿ ವ್ಯಾಲಿ ಯೋಜನೆಯ ನೀರನ್ನು ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಇಕ್ಕೆಲಗಳಲ್ಲಿ ಕಾಮಗಾರಿ ಕೆಲಸ ಮಾಡುವ ನೆಪದಲ್ಲಿ ಹೊಂಡಗಳನ್ನು ಅಗೆಯಲಾಗಿದೆ. ಮೂರು ದಿನಗಳಿಂದ ಸುರಿದ ಮಳೆಯಿಂದ ಬೆಳ್ಳೂರಿನಿಂದ ಬೆಂಗಳೂರು ಮುಖ್ಯ ರಸ್ತೆಗೆ ಹೋಗುವ ಹಳೆಯ ಮಾಲೂರು ರಸ್ತೆ ಕೆಸರು ಗದ್ದೆಯಂತಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ಯಾರೇ ಎನ್ನದೇ ತಲೆ ಮರೆಸಿಕೊಂಡಂತೆ ಇದ್ದಾರೆ ಎಂದು ನರಸಾಪುರ ಗ್ರಾಮಸ್ಥರು ಆರೋಪಿಸಿದರು.

ಬೆಳ್ಳೂರಿನಿಂದ ರಾಷ್ಟ್ರೀಯ ಹೆದ್ದಾರಿ ೭೫-ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕೆ.ಸಿ.ವ್ಯಾಲಿಯಿಂದ ಹಾಳಾಗಿದ್ದು, ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಂತಾಗಿದೆ ಆದರೂ ಕಾಮಗಾರಿ ಕೆಲಸಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸರಿಪಡಿಸುವುದು ಬಿಟ್ಟು ಕಾಮಗಾರಿ ಕೆಲಸಕ್ಕೆ ನಮಗೆ ಸಂಬಂಧವೇ ಇಲ್ಲ ಎಂಬಂತೆ ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ರಸ್ತೆಯ ಪಕ್ಕದಲ್ಲಿ ನರಸಾಪುರ ಕೈಗಾರಿಕಾ ಪ್ರದೇಶದಿಂದ ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಕೆ ಸಿ ವ್ಯಾಲಿ ನೀರನ್ನು ಹರಿಸಲು ಪೈಪ್ ಗಳನ್ನು ಹಾಕಿದ್ದು ಪ್ರಾರಂಭದಲ್ಲಿ ರಸ್ತೆಯ ಎಡಬದಿಯಲ್ಲಿ ಪೈಪ್ ಗಳನ್ನು ಹಾಕಲು ಕಾಲುವೆಗಳನ್ನು ತೋಡಲಾಗಿತ್ತು. ಆ ನಂತರ ಬಲಬದಿಯ ಕಾಲುವೆಯನ್ನು ತೋಡಿ ಪೈಪ್ ಗಳನ್ನು ಹಾಕಲಾಗಿದೆ ಆದರೆ ಇದುವರೆಗೂ ತೋಡಿದ ಹಳ್ಳಗಳನ್ನು ಸರಿಯಾಗಿ ಮುಚ್ಚದೆ ಕೆಲವೊಮ್ಮೆ ಎದುರು ಬದುರು ಗಾಡಿ ಬಂದಾಗ ಗಾಡಿಗಳು ಸಂಚರಿಸದೆ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿರುವುದು ಸಹಜವಾಗಿದೆ ಎಂದರು.

ಆದರೆ ಇದುವರೆಗೂ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಆದುದರಿಂದ ಇದನ್ನು ಕೆ ಸಿ ವ್ಯಾಲಿ ನೀರಿನ ಯೋಜನೆಯ ಮಹಾತ್ಮೆ ಅಥವಾ ಪ್ರಭಾವ ಎಂದರೆ ತಪ್ಪಾಗಲಾರದು ಎಂದರು.

ಈ ರಸ್ತೆಯಲ್ಲಿ ವಾಹನಗಳು ಚಲಿಸುವುದೇ ದುಸ್ಸಾಹಸವಾಗಿದೆ ಈ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಹೋಗುವ ಹಾಗೂ ಮಾಲೂರು ಮತ್ತು ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಹಾಗೂ ಆ ಕಡೆಯಿಂದ ಬರುವ ಎಲ್ಲಾ ವಾಹನಗಳು ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ, ಆದರೆ ಕೆಲದಿನಗಳ ಹಿಂದೆ ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರಿನಿಂದ ರಾಷ್ಟ್ರೀಯ ಹೆದ್ದಾರಿ ೭೫-ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿಗೆ ಬಗ್ಗೆ ಗ್ರಾಮಸ್ಥರು ಒತ್ತಾಯಿಸಿದರು.

ಕಾಮಗಾರಿಗೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯನ್ನು ಈ ರೀತಿ ಹಾಳು ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು ರಸ್ತೆಯನ್ನು ಸರಿಪಡಿಸಿ ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ನರಸಾಪುರ ಮತ್ತು ಬೆಳ್ಳೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿತ್ರ - ಕೋಲಾರ ತಾಲ್ಲೂಕು ನರಸಾಪುರ ಬಳಿಯ ಬೆಳ್ಳೂರು ರಸ್ತೆ ಮಳೆಯಿಂದಾಗಿ ಹಾನಿಯಾಗಿರುವುದು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande