ಯಕ್ಷಗಾನ 'ಹಾಸ್ಯರಾಜ' ಬಂಟ್ವಾಳ ಜಯರಾಮ ಆಚಾರ್ಯ ನಿಧನ
ಯಕ್ಷಗಾನ 'ಹಾಸ್ಯರಾಜ' ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ
ಯಕ್ಷಗಾನ 'ಹಾಸ್ಯರಾಜ' ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ


ಬೆಂಗಳೂರು,21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಯಕ್ಷಗಾನದ 'ಹಾಸ್ಯರಾಜ' ಎಂದೇ ಹೆಸರುವಾಸಿಯಾಗಿದ್ದ, ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ತೆರಳಿದ್ದ ಅವರು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಯಕ್ಷಗಾನ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡವು ಇಂದಿನಿಂದ ಬೆಂಗಳೂರಿನಲ್ಲಿ ನಡೆಸಿಕೊಡಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಯರಾಮ ಆಚಾರ್ಯರು ತೆರಳಿದ್ದರು. ಅದಕ್ಕಾಗಿ ಭಾನುವಾರ ಬೆಳಗ್ಗೆಯೇ ಬೆಂಗಳೂರಿನ ಆರ್.ಕೆ.ಭಟ್ಟರ ಮನೆಯಲ್ಲಿ ಉಳಿದುಕೊಂಡಿದ್ದ ಅವರಿಗೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ತೀವ್ರತರವಾದ ಹೃದಯನೋವು ಕಾಣಿಸಿಕೊಂಡಿದೆ. ಅವರೊಂದಿಗಿದ್ದ ಇತರ ಕಲಾವಿದರು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ, ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿರುವ ಬಂಟ್ವಾಳ ಜಯರಾಮ ಆಚಾರ್ಯರ ಪಾರ್ಥಿವ ಶರೀರವನ್ನು ಆರ್.ಕೆ.ಭಟ್ಟರ ಮನೆಗೆ ತಂದು ಅಂತಿಮ ದರ್ಶನಕ್ಕಿರಿಸಿ, ಬಳಿಕ ಆ್ಯಂಬುಲೆನ್ಸ್ ಮೂಲಕ ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಬಂಟ್ವಾಳ ಬೈಪಾಸ್‌ನಲ್ಲಿರುವ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande