ಇಸ್ರೋ ಸಾಧನೆ ದೇಶದ ಹೆಮ್ಮೆ: ಸಚಿವ ಅಜಯ್ ಧರಂ ಸಿಂಗ್
ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ಕರ್ನಾಟಕದಿಂದ ಸಂಪೂರ್ಣ ಸಹಕಾರ
isro-achievement-pride-of-nation-karnataka-to-support-spacetech-development-ajay-dharam-singh


ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.):

ಆ್ಯಂಕರ್:

ಇಸ್ರೋದ ಇತ್ತೀಚಿನ GSLV-F17/EOS-05 ಯಶಸ್ವಿ ಉಡಾವಣೆ ದೇಶದ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಅವರನ್ನು ಭೇಟಿ ಮಾಡಿದ ಸಚಿವರು, ಯಶಸ್ವಿ ಉಡಾವಣೆಗೆ ಅಭಿನಂದನೆ ಸಲ್ಲಿಸಿದರು. ಇಸ್ರೋದ ವಿಜ್ಞಾನಿಗಳು, ಎಂಜಿನಿಯರ್ಗಳು ಹಾಗೂ ತಾಂತ್ರಿಕ ತಂಡದ ಕಾರ್ಯವನ್ನು ಶ್ಲಾಘಿಸಿದರು.

‘ಇಸ್ರೋದ ಸಾಧನೆ ದೇಶದ ಹೆಮ್ಮೆ ಮಾತ್ರವಲ್ಲ, ಕರ್ನಾಟಕದ ಹೆಮ್ಮೆಯೂ ಹೌದು. ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ, ಸ್ಪೇಸ್ಟೆಕ್, ಡೀಪ್ಟೆಕ್, ಸ್ಟಾರ್ಟ್ಅಪ್ಗಳು ಹಾಗೂ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ’ ಎಂದು ಸಚಿವರು ತಿಳಿಸಿದರು.

ಇಸ್ರೋ ಅಧ್ಯಕ್ಷರಿಗೆ ಸಿಎಂ ಅಭಿನಂದನೆ:

ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೂರವಾಣಿ ಮೂಲಕ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರೊಂದಿಗೆ ಮಾತನಾಡಿ, ಇತ್ತೀಚಿನ ಯಶಸ್ವಿ ಉಡಾವಣೆಗೆ ಇಸ್ರೋ ಅಧ್ಯಕ್ಷರು ಹಾಗೂ ಇಡೀ ತಂಡವನ್ನು ಅಭಿನಂದಿಸಿದರು.ಇಸ್ರೋ ಮತ್ತು ಕರ್ನಾಟಕ ಸರ್ಕಾರದ ನಡುವಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಚಿವ ಅಜಯ್ ಧರಂ ಸಿಂಗ್ ಹೇಳಿದರು.

‘ಕರ್ನಾಟಕವು ಇಸ್ರೋದ ಐತಿಹಾಸಿಕ ತವರು. ಭಾರತದ ಮುಂದಿನ ಸ್ಪೇಸ್ಟೆಕ್ ಮತ್ತು ಡೀಪ್ಟೆಕ್ ಬೆಳವಣಿಗೆಯಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಇಸ್ರೋದ ಮಾರ್ಗದರ್ಶನ ಮತ್ತು ಸಹಕಾರ ಅತ್ಯಂತ ಮಹತ್ವದ್ದಾಗಿದೆ’ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ಆಯೋಜಿಸುವುದಾಗಿ ಸಚಿವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande