ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬರಪೀಡಿತ ಪ್ರದೇಶಗಳ ಘೋಷಣೆ: ಡಿಸಿಎಂ ಪರಮೇಶ್ವರ್
ಡಿಸಿಎಂ ಪರಮೇಶ್ವರ್
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬರಪೀಡಿತ ಪ್ರದೇಶಗಳ ಘೋಷಣೆ: ಡಿಸಿಎಂ ಪರಮೇಶ್ವರ್


ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಎರಡನೇ ಹಂತದ ಬರ ಪರಿಶೀಲನೆ ಅಂತಿಮ ಹಂತದಲ್ಲಿದ್ದು, 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿವೆ. ಶೀಘ್ರದಲ್ಲೇ ಈ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆಯ ಪರಿಸ್ಥಿತಿಯನ್ನು ಆಧರಿಸಿ ಹಂತ ಹಂತವಾಗಿ ಬರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಳೆದ ವರ್ಷ ರಾಜ್ಯದ ಸುಮಾರು 200 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಈ ಬಾರಿಯೂ ಕರಾವಳಿ ಪ್ರದೇಶವನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ ಕಂಡುಬರುತ್ತಿರುವುದರಿಂದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪಟ್ಟಿಗೆ ಸೇರುವ ಸಾಧ್ಯತೆ ಇದೆ ಎಂದು ಪರಮೇಶ್ವರ್ ತಿಳಿಸಿದರು.

ಕೆಲವು ಶಾಸಕರು ತಮ್ಮ ತಾಲ್ಲೂಕುಗಳನ್ನು ಉದ್ದೇಶಪೂರ್ವಕವಾಗಿ ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿರುವುದನ್ನು ಅವರು ತಳ್ಳಿಹಾಕಿದರು. ಬರ ಘೋಷಣೆಯಲ್ಲಿ ರಾಜ್ಯ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿ, ಉಪಗ್ರಹ ಆಧಾರಿತ ಚಿತ್ರಗಳು, ಸ್ಥಳ ಪರಿಶೀಲನೆ ಹಾಗೂ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಬರಪೀಡಿತ ಪ್ರದೇಶಗಳನ್ನು ಗುರುತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ತನ್ನದೇ ಆದ ರೀತಿಯಲ್ಲಿ ಬರ ಘೋಷಣೆ ಮಾಡಿದರೆ ಕೇಂದ್ರದಿಂದ ಬರ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಂದ್ರದ ನಿಗದಿತ ನಿಯಮಗಳ ಪ್ರಕಾರವೇ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ಹಿಂದೆ ಪರಮೇಶ್ವರ್ ಅವರು, ಬರ ಘೋಷಣೆ ಮಾಡಿದ ಮಾತ್ರಕ್ಕೆ ಪರಿಹಾರ ದೊರೆಯುವುದಿಲ್ಲ. ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದ್ದರು. ಹೆಚ್ಚುವರಿ ಪ್ರದೇಶಗಳು ನಿಗದಿತ ಮಾನದಂಡಗಳನ್ನು ಪೂರೈಸಿದರೆ ಅವುಗಳನ್ನೂ ಬರಪೀಡಿತವೆಂದು ಘೋಷಿಸಲಾಗುವುದು ಎಂದು ಹೇಳಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande