10 ಸಾವಿರದ ಆಸೆಗೆ 180 ಸ್ಟಾರ್ ಆಮೆಗಳ ಸಾಗಣೆ; ಬೆಂಗಳೂರಿನಲ್ಲಿ ಡಿಆರ್ಐ ದಾಳಿ
ಬೆಂಗಳೂರಿನಲ್ಲಿ DRI ಭರ್ಜರಿ ಕಾರ್ಯಾಚರಣೆ
Bengaluru-DRI-seizes-180-live-Indian-star-tortoises-arrests-smuggler


ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನಲಾದ 180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ಗಾಂಧಿನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಪರಿಶೀಲಿಸಿದಾಗ, ಹಸಿರು ಬಣ್ಣದ ಟ್ರಾಲಿ ಬ್ಯಾಗ್‌ನಲ್ಲಿ ಆಮೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಬ್ಯಾಗ್ ಪರಿಶೀಲಿಸಿದಾಗ ಆರು ಬಟ್ಟೆಯ ಕವರ್‌ಗಳಲ್ಲಿ ಒಟ್ಟು 180 ಜೀವಂತ ಇಂಡಿಯನ್ ಸ್ಟಾರ್ ಆಮೆಗಳು ಪತ್ತೆಯಾಗಿವೆ.

ವಿಚಾರಣೆ ವೇಳೆ ಆರೋಪಿ ಕಲಾಸಿಪಾಳ್ಯದಿಂದ ಟ್ರಾಲಿ ಬ್ಯಾಗ್ ಪಡೆದುಕೊಂಡಿದ್ದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಬ್ಯಾಗ್‌ನಲ್ಲಿದ್ದ ಆಮೆಗಳನ್ನು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಗೆ ತಲುಪಿಸುವಂತೆ ಸೂಚಿಸಲಾಗಿತ್ತು ಎಂದು ಹೇಳಲಾಗಿದೆ.

₹10 ಸಾವಿರ ನೀಡುವುದಾಗಿ ಭರವಸೆ

ಆಮೆಗಳನ್ನು ನಿಗದಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಿದರೆ ₹10 ಸಾವಿರ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಹಣದ ಆಸೆಗೆ ಜೀವಂತ ವನ್ಯಜೀವಿಗಳನ್ನು ಸಾಗಿಸಲು ಮುಂದಾದ ಆರೋಪಿಯನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.

ಜಪ್ತಿಯಾಗಿರುವ ಆಮೆಗಳನ್ನು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಳ್ಳಸಾಗಣೆ ಜಾಲದ ಹಿಂದೆ ಯಾರಿದ್ದಾರೆ, ಆಮೆಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರೊಂದಿಗೆ ಇನ್ನೂ ಯಾರ್ಯಾರು ಸಂಪರ್ಕ ಹೊಂದಿದ್ದಾರೆ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಇಂಡಿಯನ್ ಸ್ಟಾರ್ ಆಮೆಗಳು ಸಂರಕ್ಷಿತ ಪ್ರಭೇದವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande