ವಿಶ್ವ ಪ್ರವಾಸೋದ್ಯಮ ದಿನ:ಪ್ರಶಸ್ತಿಗಾಗಿ ನಾಮನಿರ್ದೇಶನಕ್ಕೆ ಆಹ್ವಾನ
ಪ್ರವಾಸೋದ್ಯಮ ಕ್ಷೇತ್ರದ ಸಾಧಕರಿಗೆ 35 ಪ್ರಶಸ್ತಿ
karnataka-tourism-awards-2026-35-awards-in-five-categories-nominations-till-september-17


ಬೆಂಗಳೂರು, 08ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಲು ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ ಆಯೋಜಿಸಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಸೇವಾ ಗುಣಮಟ್ಟ, ನಾವೀನ್ಯತೆ, ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಕೊಡುಗೆಯನ್ನು ಗುರುತಿಸುವುದು ಇದರ ಉದ್ದೇಶವಾಗಿದೆ.‘ಒಂದು ರಾಜ್ಯ, ಅನೇಕ ಲೋಕಗಳು’ ಎಂಬ ಪರಿಕಲ್ಪನೆಯಡಿ ರೂಪಿಸಲಾಗಿರುವ ಪ್ರಶಸ್ತಿಗಳು ರಾಜ್ಯದ 31 ಜಿಲ್ಲೆಗಳ ಪ್ರವಾಸೋದ್ಯಮ ಕ್ಷೇತ್ರದ ವೈವಿಧ್ಯಮಯ ಸಾಧನೆಗಳಿಗೆ ರಾಜ್ಯಮಟ್ಟದಲ್ಲಿ ಮಾನ್ಯತೆ ನೀಡಲಿವೆ.

ಐದು ವಿಭಾಗಗಳಲ್ಲಿ 35 ಪ್ರಶಸ್ತಿಒಟ್ಟು 35 ಪ್ರಶಸ್ತಿಗಳನ್ನು ಐದು ಪ್ರಮುಖ ವಿಭಾಗಗಳಲ್ಲಿ ನೀಡಲಾಗುತ್ತದೆ. ವಸತಿ ಮತ್ತು ಅತಿಥ್ಯ ವಿಭಾಗದಲ್ಲಿ ಹೋಟೆಲ್, ರೆಸಾರ್ಟ್, ಬೂಟಿಕ್ ಸ್ಟೇ, ಹೆರಿಟೇಜ್ ಪ್ರಾಪರ್ಟಿ, ರೆಸ್ಟೋರೆಂಟ್ ಹಾಗೂ ಆತಿಥ್ಯ ಸೇವೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಸಾರಿಗೆ ವಿಭಾಗದಲ್ಲಿ ದೇಶೀಯ ಹಾಗೂ ಇನ್ಬೌಂಡ್ ಟೂರ್ ಆಪರೇಟರ್ಗಳು, ಸಾಹಸ ಪ್ರವಾಸೋದ್ಯಮ ಸಂಸ್ಥೆಗಳು, ಸಾರಿಗೆ ಸೇವೆಗಳು, MICE ಹಾಗೂ ನವೀನ ಪ್ರವಾಸ ಸೇವೆಗಳನ್ನು ಪರಿಗಣಿಸಲಾಗುತ್ತದೆ.ಕಾರ್ಯಕ್ರಮಗಳು, ಸ್ಥಳಗಳು ಮತ್ತು ಮೂಲಸೌಕರ್ಯ ವಿಭಾಗದಲ್ಲಿ ಹೆರಿಟೇಜ್ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು, ಕಾರ್ಯಕ್ರಮಗಳು ಹಾಗೂ ಪ್ರವಾಸೋದ್ಯಮ ಸ್ನೇಹಿ ಸ್ಥಳಗಳನ್ನು ಗುರುತಿಸಲಾಗುತ್ತದೆ.

ಶಿಕ್ಷಣ, ಪ್ರಕಟಣೆಗಳು ಮತ್ತು ವ್ಯಕ್ತಿಗಳು ವಿಭಾಗದಲ್ಲಿ ಪ್ರವಾಸಿ ಮಾರ್ಗದರ್ಶಕರು, ನೈಸರ್ಗಿಕ ತಜ್ಞರು, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ತಂತ್ರಜ್ಞಾನ ಕ್ಷೇತ್ರದ ಸಾಧಕರು, ಲೇಖಕರು ಹಾಗೂ ಜೀವಮಾನ ಸಾಧಕರನ್ನು ಗೌರವಿಸಲಾಗುತ್ತದೆ.

ಸುಸ್ಥಿರತೆ ಮತ್ತು ಗ್ರಾಮೀಣ ಪ್ರವಾಸೋದ್ಯಮ ವಿಭಾಗದಲ್ಲಿ ಹೋಂಸ್ಟೇ, ಗ್ರಾಮೀಣ ಪ್ರವಾಸೋದ್ಯಮ ಯೋಜನೆಗಳು, ಸುಸ್ಥಿರ ಪ್ರವಾಸೋದ್ಯಮ ಹಾಗೂ ಪ್ರವಾಸಿ ತಾಣಗಳ ಉತ್ತಮ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.

ಅರ್ಹತೆ ಆಧಾರಿತ ಆಯ್ಕೆಉದ್ಯಮ ಕ್ಷೇತ್ರದ ಹಿರಿಯರು, ವಿಷಯ ತಜ್ಞರು ಹಾಗೂ ಸಂಬಂಧಿತ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ಸ್ಕ್ರೀನಿಂಗ್ ಸಮಿತಿಯು ಪ್ರಶಸ್ತಿಗೆ ನಾಮನಿರ್ದೇಶನಗೊಂಡವರನ್ನು ಮೌಲ್ಯಮಾಪನ ಮಾಡಲಿದೆ. ಸೇವಾ ಗುಣಮಟ್ಟ, ಪ್ರವಾಸಿಗರ ಅಭಿಪ್ರಾಯ ಮತ್ತು ಅನುಭವ, ನಾವೀನ್ಯತೆ, ಪರಿಸರ ಸುಸ್ಥಿರತೆ ಹಾಗೂ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ.

ಅರ್ಹ ಹೋಟೆಲ್ಗಳು, ರೆಸಾರ್ಟ್ಗಳು, ಟೂರ್ ಆಪರೇಟರ್ಗಳು, ನೋಂದಾಯಿತ ಹೋಂಸ್ಟೇಗಳು, ಪ್ರವಾಸ ಸೇವಾ ಸಂಸ್ಥೆಗಳು, ಪ್ರವಾಸೋದ್ಯಮ ಸ್ಟಾರ್ಟ್ಅಪ್ಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಪ್ಟೆಂಬರ್ 17, 2026ರ ರಾತ್ರಿ 11.59ರವರೆಗೆ ನಾಮನಿರ್ದೇಶನ ಸಲ್ಲಿಸಬಹುದಾಗಿದೆ.ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

“ಕರ್ನಾಟಕದ ಪ್ರವಾಸೋದ್ಯಮದ ನಿಜವಾದ ಶಕ್ತಿ ಪ್ರವಾಸಿ ತಾಣಗಳ ಜತೆಗೆ ಪ್ರವಾಸಿಗರಿಗೆ ಉತ್ತಮ ಅನುಭವ ನೀಡಲು ಶ್ರಮಿಸುತ್ತಿರುವ ಉದ್ಯಮಿಗಳು, ಹೋಟೆಲ್ಗಳು, ಪ್ರವಾಸ ನಿರ್ವಾಹಕರು, ಮಾರ್ಗದರ್ಶಕರು ಹಾಗೂ ಸ್ಥಳೀಯ ಸಮುದಾಯಗಳಲ್ಲಿದೆ.

ಅತ್ಯುತ್ತಮ ಸೇವೆ, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಗೌರವಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮಾನದಂಡ ರೂಪಿಸುವುದು ಪ್ರಶಸ್ತಿಯ ಉದ್ದೇಶ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande