ಗಣೇಶ ವಿಸರ್ಜನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಶಾಸಕ ಯತ್ನಾಳ ಸೂಚನೆ
ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಗಣೇಶೋತ್ಸವದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಕೇಂದ್ರ ಕಾರಾಗೃಹದ ಸಮೀಪ ಮಹಾನಗರ ಪಾಲಿಕೆ ವತಿಯಿಂದ ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿರುವ ಕೃತಕ ಹೊಂಡದ ಕಾಮಗಾರಿಯನ
ಯತ್ನಾಳ್


ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಗಣೇಶೋತ್ಸವದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದ ಕೇಂದ್ರ ಕಾರಾಗೃಹದ ಸಮೀಪ ಮಹಾನಗರ ಪಾಲಿಕೆ ವತಿಯಿಂದ ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿರುವ ಕೃತಕ ಹೊಂಡದ ಕಾಮಗಾರಿಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀಕ್ಷಿಸಿದರು.

ಕೃತಕ ಹೊಂಡ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯ ಪ್ರಗತಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಗೆ ಕೈಗೊಳ್ಳಲಾಗುತ್ತಿರುವ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗಣೇಶೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ವಿವಿಧ ಗಜಾನನ ಮಂಡಳಿಗಳು ವಿಸರ್ಜನೆಗೆ ಆಗಮಿಸುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ವಿಸರ್ಜನೆ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಣೇಶ ಮಂಡಳಿಗಳು ಹಾಗೂ ಭಕ್ತರಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಯತ್ನಾಳ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅದೇ ರೀತಿ ವಿಸರ್ಜನಾ ಸ್ಥಳದಲ್ಲಿ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಗಣೇಶ ಮೂರ್ತಿಗಳ ವಿಸರ್ಜನೆ ವ್ಯವಸ್ಥೆಯನ್ನು ವೈಜ್ಞಾನಿಕ ಹಾಗೂ ಶಿಸ್ತುಬದ್ಧವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.

ನಗರದಲ್ಲಿ ಗಣೇಶೋತ್ಸವವನ್ನು ಶಾಂತಿಯುತ, ಸುವ್ಯವಸ್ಥಿತ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲು ಸಾರ್ವಜನಿಕರು ಮತ್ತು ಗಜಾನನ ಮಂಡಳಿಗಳು ಸಹಕಾರ ನೀಡಬೇಕು. ಆಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಳ್ಳುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಉತ್ಸವದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂಬ ಆಶಯವೂ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಮುಖಂಡರು, ಸ್ವಾಮಿ ವಿವೇಕಾನಂದ ಸೇನೆಯ ಪದಾಧಿಕಾರಿಗಳು ಹಾಗೂ ವಿವಿಧ ಗಜಾನನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಗಣೇಶ ವಿಸರ್ಜನೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತು ಚರ್ಚಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande