ಗಣಪತಿ ಉತ್ಸವದ ಅನುಮತಿಗೆ ಪುಟ್ಟ ಮಕ್ಕಳ ಹೆಜ್ಜೆ; ಮುಧೋಳ ಪೊಲೀಸರಿಗೆ ಮನವಿ
ಬಾಗಲಕೋಟೆ, 08 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಗಣಪತಿ ಉತ್ಸವದ ಸಡಗರಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಪುಟ್ಟ ಮಕ್ಕಳ ಮುಗ್ಧತೆ ಹಾಗೂ ಸಂಸ್ಕೃತಿಯ ಮೇಲಿನ ಭಕ್ತಿ ಎಲ್ಲರ ಗಮನ ಸೆಳೆದಿದೆ. ಗಣಪತಿ ಉತ್ಸವ ಆಚರಣೆಗೆ ಅಗತ್ಯವಾದ ಅನುಮತಿ ಪಡೆಯಲು ಚಿಕ್ಕ ಮಕ್
ಗಣಪ್ಪನ ಅನುಮತಿ


ಬಾಗಲಕೋಟೆ, 08 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಗಣಪತಿ ಉತ್ಸವದ ಸಡಗರಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಪುಟ್ಟ ಮಕ್ಕಳ ಮುಗ್ಧತೆ ಹಾಗೂ ಸಂಸ್ಕೃತಿಯ ಮೇಲಿನ ಭಕ್ತಿ ಎಲ್ಲರ ಗಮನ ಸೆಳೆದಿದೆ.

ಗಣಪತಿ ಉತ್ಸವ ಆಚರಣೆಗೆ ಅಗತ್ಯವಾದ ಅನುಮತಿ ಪಡೆಯಲು ಚಿಕ್ಕ ಮಕ್ಕಳು ಮುಧೋಳ ಪೊಲೀಸ್ ಠಾಣೆಗೆ ಆಗಮಿಸಿದ ಕ್ಷಣ ವಿಶೇಷವಾಗಿತ್ತು. ಸಾಮಾನ್ಯವಾಗಿ ಉತ್ಸವದ ಅನುಮತಿ ಪಡೆಯಲು ಸಂಘಟಕರು, ಯುವಕರು ಹಾಗೂ ಪದಾಧಿಕಾರಿಗಳು ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವುದು ಸಹಜ. ಆದರೆ, ಈ ಬಾರಿ ಪುಟ್ಟ ಮಕ್ಕಳು ಸ್ವತಃ ಪೊಲೀಸ್ ಸಿಬ್ಬಂದಿಯ ಮುಂದೆ ಬಂದು ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮನವಿ ಮಾಡಿರುವುದು ವಿಶೇಷವಾಗಿತ್ತು.

ಮಕ್ಕಳ ಕಣ್ಣುಗಳಲ್ಲಿ ಗಣಪತಿ ಬಪ್ಪನ ಮೇಲಿನ ಅಪಾರ ಭಕ್ತಿ, ಉತ್ಸವದ ಸಂಭ್ರಮ ಹಾಗೂ ತಮ್ಮ ಸಂಸ್ಕೃತಿ-ಪರಂಪರೆಯ ಬಗ್ಗೆ ಇರುವ ಹೆಮ್ಮೆ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಅವರ ಮುಗ್ಧ ಮಾತುಗಳು ಹಾಗೂ ಉತ್ಸಾಹದ ನಡೆ ಅಲ್ಲಿದ್ದವರ ಗಮನ ಸೆಳೆಯುವುದರ ಜೊತೆಗೆ ಮನಸ್ಸಿಗೆ ಸಂತಸ ಮೂಡಿಸಿತು.

ಈ ಕುರಿತು ಹಿಂದೂ ಸಂಘಟನೆ ಸದಸ್ಯ ಭೀಮು ಮಶ್ಯಾಳ ಮಾತನಾಡಿ, “ಇದು ಕೇವಲ ಅನುಮತಿ ಕೇಳಲು ಮಕ್ಕಳು ಬಂದ ಕ್ಷಣವಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲಿನ ಪುಟ್ಟ ಹೃದಯಗಳ ಭಕ್ತಿಯನ್ನು ಕಂಡ ಕ್ಷಣ. ಮಕ್ಕಳ ಕಣ್ಣುಗಳಲ್ಲಿದ್ದ ಭಕ್ತಿ, ಉತ್ಸಾಹ ಹಾಗೂ ಮುಗ್ಧತೆ ನಿಜಕ್ಕೂ ಮನಸ್ಸಿಗೆ ಆನಂದ ತಂದಿತು” ಎಂದು ಹೇಳಿದರು.

ಗಣೇಶೋತ್ಸವದಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವುದು ಮಹತ್ವದ್ದಾಗಿದೆ. ಇಂದು ಗಣಪತಿ ಉತ್ಸವದ ಅನುಮತಿಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಈ ಪುಟ್ಟ ಹೆಜ್ಜೆಗಳು, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲಿ ಎಂಬ ಆಶಯ ವ್ಯಕ್ತವಾಗಿದೆ.

ಮಕ್ಕಳ ಈ ವಿಶೇಷ ನಡೆ ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದ್ದು, “ಇಂದು ಪುಟ್ಟ ಹೆಜ್ಜೆಗಳು… ನಾಳೆ ಸಂಸ್ಕೃತಿಯನ್ನು ಕಾಪಾಡುವ ದೊಡ್ಡ ಶಕ್ತಿ” ಎಂಬ ಸಂದೇಶ ಎಲ್ಲರ ಗಮನ ಸೆಳೆಯುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande