
ವಿಜಯಪುರ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಕುರಿತು ಆರಂಭವಾಗಿದ್ದ ಚರ್ಚೆ ಇದೀಗ ತೀವ್ರ ರಾಜಕೀಯ ಸಂಘರ್ಷದ ರೂಪ ಪಡೆದುಕೊಂಡಿದೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳನ್ನು ಕೈಬಿಟ್ಟಿರುವ ವಿಚಾರ ಆಡಳಿತಾತ್ಮಕ ಚರ್ಚೆಯ ಮಿತಿಯನ್ನು ಮೀರಿ, ಜಿಲ್ಲಾ ರಾಜಕೀಯದಲ್ಲಿ ಆರೋಪ–ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ. ಈ ವಿಚಾರವಾಗಿ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ನಡುವೆ ನಡೆಯುತ್ತಿರುವ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಇದೀಗ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಪ್ರವೇಶದಿಂದ ವಿವಾದ ಮತ್ತಷ್ಟು ಕಾವೇರಿದೆ.
ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶಾಸಕ ಅಪ್ಪಾಜಿ ನಾಡಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಕ್ಷೇತ್ರದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಅವರು, ಬರ ಘೋಷಣೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಕ್ಷೇತ್ರದ ರೈತರು ಬರದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದೇ ಇರುವುದರಿಂದ ರೈತರಿಗೆ ಸಿಗಬೇಕಾದ ಪರಿಹಾರ ಹಾಗೂ ಸರ್ಕಾರದ ನೆರವು ತಪ್ಪುವ ಸಾಧ್ಯತೆ ಇದೆ ಎಂದು ನಾಡಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಮೇಲಿನ ರಾಜಕೀಯ ಸಿಟ್ಟನ್ನು ಕ್ಷೇತ್ರದ ಅನ್ನದಾತರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುದ್ದೇಬಿಹಾಳದ ಮಾಜಿ ಬಿಜೆಪಿ ಶಾಸಕರ ಮೇಲಿನ ರಾಜಕೀಯ ಒಲವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ರೈತರ ಹಿತವನ್ನು ಕಡೆಗಣಿಸಲಾಗಿದೆ ಎಂಬ ರೀತಿಯಲ್ಲಿಯೂ ನಾಡಗೌಡ ಆರೋಪ ಮಾಡಿದ್ದು, ಈ ಹೇಳಿಕೆ ಜಿಲ್ಲಾ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
‘ಬರ ಘೋಷಣೆಯಲ್ಲಿ ಅನ್ಯಾಯವಾದರೆ ಹೋರಾಟ’
ಮುದ್ದೇಬಿಹಾಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿದ್ದರೆ ರೈತರ ಪರವಾಗಿ ಸತ್ಯಾಗ್ರಹ ಸೇರಿದಂತೆ ಹೋರಾಟ ನಡೆಸುವುದಾಗಿ ಶಾಸಕ ಅಪ್ಪಾಜಿ ನಾಡಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬರದಂತಹ ಗಂಭೀರ ವಿಚಾರವನ್ನು ರಾಜಕೀಯದ ದೃಷ್ಟಿಯಿಂದ ನೋಡದೆ, ರೈತರ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ಬರ ಘೋಷಣೆ ಎನ್ನುವುದು ವೈಜ್ಞಾನಿಕ ಹಾಗೂ ತಾಂತ್ರಿಕ ಮಾನದಂಡಗಳ ಆಧಾರದ ಮೇಲೆ ನಡೆಯುವ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಯಾವುದೇ ವ್ಯಕ್ತಿಯ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲ ಹಂತದಲ್ಲಿ ಪ್ರಕಟವಾದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ತಮ್ಮ ಸ್ವಕ್ಷೇತ್ರವೂ ಸೇರ್ಪಡೆಯಾಗಿರಲಿಲ್ಲ. ಬಳಿಕ ಅಗತ್ಯ ಮಾನದಂಡಗಳು ಹಾಗೂ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಮುಂದಿನ ಹಂತದಲ್ಲಿ ತಾಲೂಕುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಈ ವಿಚಾರದ ಅರಿವು ಇದ್ದರೂ ಶಾಸಕ ನಾಡಗೌಡರು ರಾಜಕೀಯ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವರು ತಿರುಗೇಟು ನೀಡಿದ್ದಾರೆ.
ವೈಯಕ್ತಿಕ ಟೀಕೆಗೆ ತಿರುಗಿದ ವಾಕ್ಸಮರ
ಬರದ ಪಟ್ಟಿಯ ವಿಚಾರವಾಗಿ ಆರಂಭವಾದ ಇಬ್ಬರು ನಾಯಕರ ನಡುವಿನ ಮಾತಿನ ಸಮರ ಇದೀಗ ವೈಯಕ್ತಿಕ ಟೀಕೆಗಳ ಹಂತಕ್ಕೂ ತಲುಪಿದೆ. ಸಚಿವ ಎಂ.ಬಿ. ಪಾಟೀಲ್ ಅವರು ಶಾಸಕ ನಾಡಗೌಡರ ಹೇಳಿಕೆಗಳ ಕುರಿತು ಕಟುವಾಗಿ ಪ್ರತಿಕ್ರಿಯಿಸುವ ಮೂಲಕ ಅವರ ವಯಸ್ಸು ಹಾಗೂ ಮಾನಸಿಕ ಸ್ಥಿತಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ. ಇದೇ ರೀತಿಯ ಹೇಳಿಕೆಗಳು ಮುಂದುವರಿದರೆ ಚಿಕಿತ್ಸೆ ಕೊಡಿಸಬೇಕಾಗುತ್ತದೆ ಎಂಬ ರೀತಿಯಲ್ಲಿ ಸಚಿವರು ವಾಗ್ದಾಳಿ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ಹಂತದ ಪಟ್ಟಿಯಲ್ಲಿ ಅಗತ್ಯ ಮಾನದಂಡಗಳನ್ನು ಪೂರೈಸುವ ಎಲ್ಲಾ ತಾಲೂಕುಗಳು ಸೇರ್ಪಡೆಯಾಗಲಿವೆ ಎಂದು ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕಣಕ್ಕಿಳಿದ ಮಾಜಿ ಶಾಸಕ ನಡಹಳ್ಳಿ
ನಾಡಗೌಡ ಹಾಗೂ ಎಂ.ಬಿ. ಪಾಟೀಲ್ ನಡುವಿನ ವಾಕ್ಸಮರಕ್ಕೆ ಇದೀಗ ಮುದ್ದೇಬಿಹಾಳದ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಪ್ರವೇಶವೂ ಆಗಿದೆ. ಶಾಸಕ ನಾಡಗೌಡರ ವಿರುದ್ಧ ವಾಗ್ದಾಳಿ ನಡೆಸಿರುವ ನಡಹಳ್ಳಿ, ಅವರದ್ದು ನಾಟಕೀಯ ರಾಜಕಾರಣ ಎಂದು ಟೀಕಿಸಿದ್ದಾರೆ.
ಸ್ವಪಕ್ಷದ ಸಚಿವರೇ ನಾಡಗೌಡರ ಮಾನಸಿಕ ಸ್ಥಿತಿಯ ಕುರಿತು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿರುವ ನಡಹಳ್ಳಿ, ಜನರು ನಾಡಗೌಡರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಮುದ್ದೇಬಿಹಾಳ–ತಾಳಿಕೋಟೆ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ವಿಚಾರ ಇದೀಗ ಕೇವಲ ಆಡಳಿತಾತ್ಮಕ ಅಥವಾ ತಾಂತ್ರಿಕ ವಿಷಯವಾಗಿ ಉಳಿದಿಲ್ಲ.ಕಾಂಗ್ರೆಸ್ನೊಳಗಿನ ನಾಯಕರ ನಡುವಿನ ರಾಜಕೀಯ ಭಿನ್ನಾಭಿಪ್ರಾಯ, ಹಿಂದಿನ ಚುನಾವಣಾ ರಾಜಕೀಯದ ನೆರಳು ಹಾಗೂ ಕ್ಷೇತ್ರದ ಮೇಲಿನ ಹಿಡಿತದ ವಿಚಾರಗಳೂ ಈ ವಿವಾದದೊಂದಿಗೆ ಬೆಸೆದುಕೊಂಡಿರುವಂತೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ರೈತರ ಸಮಸ್ಯೆಗಿಂತ ರಾಜಕೀಯ ಕದನವೇ ಮುನ್ನೆಲೆಯಲ್ಲಿ..!
ಒಟ್ಟಿನಲ್ಲಿ, ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ಸೇರ್ಪಡೆ–ಹೊರಗಿಡುವ ವಿಚಾರದಿಂದ ಆರಂಭವಾದ ವಿವಾದ ಇದೀಗ ಆರೋಪ–ಪ್ರತ್ಯಾರೋಪ, ವೈಯಕ್ತಿಕ ಟೀಕೆ ಹಾಗೂ ರಾಜಕೀಯ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.
ಒಂದೆಡೆ ಬರದಿಂದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರದ ಪರಿಹಾರ ಹಾಗೂ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ, ರೈತರ ಪರವಾಗಿ ಧ್ವನಿ ಎತ್ತಬೇಕಾದ ರಾಜಕೀಯ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿರುವುದು ಪರಿಸ್ಥಿತಿಯ ಮತ್ತೊಂದು ಮುಖವಾಗಿದೆ.
ಬರದ ಬಿಸಿಲಿನಿಂದ ಮುದ್ದೇಬಿಹಾಳ–ತಾಳಿಕೋಟೆ ಭಾಗದ ರೈತರು ತತ್ತರಿಸುತ್ತಿರುವಾಗ, ರಾಜಕೀಯ ವಲಯದಲ್ಲಿ ಮಾತ್ರ ನಾಡಗೌಡ–ಎಂ.ಬಿ. ಪಾಟೀಲ್ ನಡುವಿನ ವಾಕ್ಸಮರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಸೇರ್ಪಡೆಯಾಗುತ್ತವೆಯೇ? ಅಥವಾ ಈ ವಿಚಾರವೇ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande