
ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಸೆ.17ರಂದು ದೇಶಾದ್ಯಂತ 76 ಕೋಟಿಗೂ ಅಧಿಕ ದೀಪಗಳನ್ನು ಬೆಳಗಿಸಿ ‘ಆಶೀರ್ವಾದ ದೀಪಾವಳಿ’ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಮನೆಗಳಲ್ಲಿ ದೀಪ ಬೆಳಗಿಸುವ ‘ಒಂದು ದೀಪ ಆಶೀರ್ವಾದದ’ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ವಕ್ತಾರ ಜಫರ್ ಇಸ್ಲಾಂ ತಿಳಿಸಿದ್ದಾರೆ. ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ 25 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಸೆ.17ರಿಂದ ಅ.17ರವರೆಗೆ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ ಮಾಸ’ ಆಚರಿಸಲಾಗುವುದು ಎಂದರು.
ಈ ಅವಧಿಯಲ್ಲಿ ‘25 ಕೋಟಿ ಮಕ್ಕಳ ಕನಸಿನ ಭಾರತ’, ‘ನಮೋ ಸೇವಾ ಗಾಥೆ’, ‘ಅಂಗಳದ ಉತ್ಸವ’, ‘ಬದಲಾವಣೆಯ ಕಥೆ’, ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’, ‘ಸೇವಾ ಜ್ಯೋತಿ ಯಾತ್ರೆ’, ‘ವಡನಗರದಿಂದ ವಾರಾಣಸಿ’, ‘ಸೇವೆಯೇ ನನ್ನ ಕೊಡುಗೆ’, ‘ಸೇವಾ ಸೇತು’, ‘ಸರ್ಕಾರ ನಿಮ್ಮ ಮನೆ ಬಾಗಿಲಿಗೆ’, ‘ರಂಗೋಲಿ ರಾಷ್ಟ್ರ’ ಹಾಗೂ ‘ರಾಷ್ಟ್ರೀಯ ನವೋದ್ಯಮ ಸವಾಲು’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ದೇಶಾದ್ಯಂತ ಕೇಂದ್ರ ಸರ್ಕಾರದ ಸುಮಾರು 125 ಯೋಜನೆಗಳ ಫಲಾನುಭವಿಗಳನ್ನು ಅಭಿಯಾನದಲ್ಲಿ ವಿಶೇಷವಾಗಿ ಒಳಗೊಳ್ಳಲಾಗುವುದು. ಆಯುಷ್ಮಾನ್ ಭಾರತ ಯೋಜನೆಯಡಿ 41 ಕೋಟಿಗೂ ಅಧಿಕ ಕಾರ್ಡ್‌ಗಳು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಸುಮಾರು 81.35 ಕೋಟಿ ಫಲಾನುಭವಿಗಳು, ಉಜ್ವಲ ಯೋಜನೆಯಡಿ 10.58 ಕೋಟಿ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 9.32 ಕೋಟಿಗೂ ಅಧಿಕ ರೈತರು ಫಲಾನುಭವಿಗಳಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಭಿಯಾನ ಯಶಸ್ವಿಗೊಳಿಸಲು ಕೇಂದ್ರ ಮಟ್ಟದಲ್ಲಿ ಮನ್ಸುಖ್ ಮಾಂಡವಿಯಾ, ಡಿ. ಪುರಂದೇಶ್ವರಿ ಹಾಗೂ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನೊಳಗೊಂಡ ತಂಡ ರಚಿಸಲಾಗಿದೆ. ರಾಜ್ಯಗಳಲ್ಲಿಯೂ ತಂಡಗಳನ್ನು ರಚಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ಮನೆಗಳಿಗೆ ತಲುಪಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.