
ಕೋಲಾರ, 17 ಸೆಪ್ಟೆಂಬರ್ (ಹಿ. ಸ.)
ಆ್ಯಂಕರ್ : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಕಾಲದಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕೋಲಾರ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೧೯ ರ ಶನಿವಾರದಂದು ಹೋಬಳಿ ಮಟ್ಟದಲ್ಲಿ 'ಪ್ರಜಾಸೇವಾ ಆಂದೋಲನ' ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ೩ನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಈ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಉಸ್ತುವಾರಿ ಸಚಿವರು ಸಭೆಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಆಯಾ ಕ್ಷೇತ್ರದ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲೇ ಹೋಬಳಿ ಮಟ್ಟದಲ್ಲಿ ಈ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಹೋಬಳಿಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಮಾರ್ಕಂಡಪುರ ರಸ್ತೆಯಲ್ಲಿರುವ ವಿದ್ಯಾಭಿವೃದ್ಧಿ ಪ್ರೌಢಶಾಲೆಯಲ್ಲಿ ಶಾಸಕ ಡಾ. ಕೊತ್ತೂರು ಜಿ. ಮಂಜುನಾಥ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೆ.ಜಿ.ಎಫ್ನ ಕ್ಯಾಸಂಬಳ್ಳಿ ಹೋಬಳಿಯ ಬೇತಮಂಗಲ ಮುಖ್ಯ ರಸ್ತೆಯ ಗಂಗಮ್ಮ ದೇವಾಲಯ ಪಕ್ಕದ ಮೈದಾನದಲ್ಲಿ ಶಾಸಕಿ ಡಾ. ರೂಪಕಲಾ ಎಂ. ಶಶಿಧರ್ ಹಾಗೂ ಮುಳಬಾಗಿಲಿನ ತಾಯಲೂರು ಹೋಬಳಿಯ ಮೋತಕಪಲ್ಲಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶಾಸಕ ಸಮೃದ್ಧಿ ವಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂತೆಯೇ, ಶ್ರೀನಿವಾಸಪುರದ ಯೆಲ್ಲೂರು ಹೋಬಳಿಯ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಬಂಗಾರಪೇಟೆಯ ಕಸಬಾ ಹೋಬಳಿಯ ಡಿ.ಕೆ.ಹಳ್ಳಿ/ರಾಬರ್ಟ್ಸನ್ ಪೇಟೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ ಮತ್ತು ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶಾಸಕ ಕೆ.ವೈ. ನಂಜೇಗೌಡ ಅವರು ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸಭೆ ನಡೆಯುವ ಸ್ಥಳದಲ್ಲಿ ಇಲಾಖಾವಾರು ಅರ್ಜಿ ಸ್ವೀಕೃತಿ ಕೌಂಟರ್ಗಳನ್ನು ಸ್ಥಾಪಿಸಲಾಗುತ್ತದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಸ್ಥಳದಲ್ಲಿಯೇ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ, ಸ್ವೀಕೃತಿ ನೀಡಲಾಗುವುದು. ಸಮಸ್ಯೆಗಳ ಪರಿಹಾರದ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳಲು ಸಹ ಕ್ರಮ ಕೈಗೊಳ್ಳಲಾಗುತ್ತದೆ. ಈ ಹೋಬಳಿ ಮಟ್ಟದ ಸಭೆಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಕೋಲಾರ ಜಿಲ್ಲೆಯಾದ್ಯಂತ ಸೆಪ್ಟೆಂಬರ್ ೧೯ ರ ಶನಿವಾರದಂದು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ 'ಪ್ರಜಾಸೇವೆ ಆಂದೋಲನ' ಸಭೆಗಳನ್ನು ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಕರೆ ನೀಡಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊ0ದಿಗೆ ಈ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗಳಲ್ಲಿ ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲಿದ್ದು, ಸಾರ್ವಜನಿಕರು ತಮ್ಮ ದೀರ್ಘಕಾಲದ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ.
ಸಾರ್ವಜನಿಕರಿಗೆ ಯಾವುದೇ ಗೊಂದಲವಾಗದ0ತೆ ಸಭೆ ನಡೆಯುವ ಮೈದಾನ ಅಥವಾ ಶಾಲಾ ಆವರಣದಲ್ಲಿ ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಅರ್ಜಿ ಸ್ವೀಕೃತಿ ಕೌಂಟರ್ಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಸಲ್ಲಿಸುವ ಕುಂದುಕೊರತೆ ಅರ್ಜಿಗಳನ್ನು ಸ್ಥಳದಲ್ಲಿಯೇ ಲ್ಯಾಪ್ಟಾಪ್ ಹಾಗೂ ಇಂಟರ್ನೆಟ್ ಬಳಕೆ ಮೂಲಕ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ ಮತ್ತು ಸ್ಥಳದಲ್ಲೇ ಪ್ರತಿಯೊಬ್ಬರಿಗೂ ವಿಶಿಷ್ಟ ಸಂಖ್ಯೆಯುಳ್ಳ ಸ್ವೀಕೃತಿ ರಸೀದಿಯನ್ನು ನೀಡಲಾಗುತ್ತದೆ. ಕೇವಲ ಸಮಸ್ಯೆಗಳ ಪರಿಹಾರ ಮಾತ್ರವಲ್ಲದೆ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಸ್ಥಳದಲ್ಲಿಯೇ ನೋಂದಾಯಿಸಿಕೊಳ್ಳಲು ಸಹ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಸಭೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಸಭೆಗಳು ಜರುಗಲಿವೆ. ಕೆ.ಜಿ.ಎಫ್ನ ಕ್ಯಾಸಂಬಳ್ಳಿ ಹೋಬಳಿ, ಮುಳಬಾಗಿಲಿನ ತಾಯಲೂರು ಹೋಬಳಿ, ಶ್ರೀನಿವಾಸಪುರದ ಯೆಲ್ಲೂರು ಹೋಬಳಿ, ಬಂಗಾರಪೇಟೆಯ ಕಸಬಾ ಹೋಬಳಿ, ಮಾಲೂರಿನ ಲಕ್ಕೂರು ಹೋಬಳಿ ಹಾಗೂ ಕೋಲಾರದ ವಕ್ಕಲೇರಿ ಹೋಬಳಿ ಕೇಂದ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಈ ಸಭೆಗಳು ನಡೆಯಲಿವೆ. ಆಯಾ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್