
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸಿಎಸ್ಆರ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ. ನಿಧಿಯನ್ನು ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸೂಚಿಸಿದರು.
ವಿಕಾಸಸೌಧದಲ್ಲಿ ಬುಧವಾರ ಡಿಸ್ಟಿಲರಿ ಮಾಲೀಕರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಿಎಸ್ಆರ್ ನಿಧಿಯಡಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಿಎಸ್ಆರ್ ನಿಧಿಯನ್ನು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಚರಂಡಿ ಅಭಿವೃದ್ಧಿ, ಶಾಲಾ-ಕಾಲೇಜುಗಳ ಮೂಲಸೌಕರ್ಯ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ ಬಳಸಬೇಕು. ಇದರಿಂದ ನಿಧಿಯ ಸಮರ್ಪಕ ಬಳಕೆಯ ಜತೆಗೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ” ಎಂದು ಶಿವಲಿಂಗೇಗೌಡ ಹೇಳಿದರು.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮದ್ಯ ವಿತರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಅಕ್ರಮ ಮದ್ಯ ಉತ್ಪಾದನೆ ಮತ್ತು ಪೂರೈಕೆಯನ್ನು ನಿಯಂತ್ರಿಸಲು ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
“ತೆರಿಗೆ ವಂಚನೆ ಮಾಡುವವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಗೋವಾದಿಂದ ಎ-ಕ್ಲಾಸ್ ಮದ್ಯವನ್ನು ಕರ್ನಾಟಕಕ್ಕೆ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕು” ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ ಸೂಚನೆ ನೀಡಿದರು.
ಅಕ್ರಮ ಮದ್ಯ ಮಾರಾಟ ಹಾಗೂ ತೆರಿಗೆ ವಂಚನೆ ತಡೆಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುವಂತೆ ಅವರು ಸೂಚಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R