
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಯೋಜನೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೂಚಿಸಿದರು.
ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮದ ಸಭಾಂಗಣದಲ್ಲಿ ಬುಧವಾರ ಕಾವೇರಿ ನೀರಾವರಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಲೆಕ್ಕಾಚಾರ ಮಾಡುವ ಬದಲು ಫೀಲ್ಡಿಗಿಳಿದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
“ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಅಮಾನತು ಮಾಡಲಾಗುವುದು. ಅಧಿಕಾರಿಗಳು ಫೀಲ್ಡಿಗಿಳಿದು ಕೆಲಸ ಮಾಡಬೇಕು” ಎಂದು ಸಚಿವರು ಎಚ್ಚರಿಕೆ ನೀಡಿದರು.
ಡ್ಯಾಂಗಳ ಮಾಹಿತಿ ದಿನಕ್ಕೆ ಎರಡು ಬಾರಿರಾಜ್ಯದ ಡ್ಯಾಂಗಳಲ್ಲಿನ ನೀರಿನ ಪ್ರಮಾಣ, ಡೆಡ್ ಸ್ಟೋರೇಜ್, ತಮಿಳುನಾಡಿಗೆ ಹರಿಸಿರುವ ನೀರು, ಬಿಳಿಗುಂಡ್ಲುವಿನಲ್ಲಿ ದಾಖಲಾಗಿರುವ ನೀರಿನ ಪ್ರಮಾಣ ಹಾಗೂ ಅಚ್ಚುಕಟ್ಟು ಪ್ರದೇಶದ ಪರಿಸ್ಥಿತಿಯ ಮಾಹಿತಿಯನ್ನು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಗಮದ ವ್ಯಾಪ್ತಿಯ 23 ಸಣ್ಣ ಅಣೆಕಟ್ಟುಗಳ ಪೈಕಿ ಮಂದಗೆರೆ ಮತ್ತು ಹೇಮಗಿರಿ ಅಣೆಕಟ್ಟುಗಳು ಹಳೆಯದಾಗಿದ್ದು, ಅವುಗಳ ದುರಸ್ತಿಗೆ ತಕ್ಷಣ ಅಂದಾಜು ಪಟ್ಟಿ ಸಿದ್ಧಪಡಿಸಿ ನೀರಿನ ಸೋರಿಕೆ ತಡೆಯಬೇಕು ಎಂದರು.
ಹೇಮಾವತಿ ನೀರನ್ನು ಕುಣಿಗಲ್ ಮಾರ್ಗವಾಗಿ ಹುಲಿಯೂರುದುರ್ಗದವರೆಗೆ ಹರಿಸಲು ಬಾಕಿ ಇರುವ 32 ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸುವಂತೆಯೂ ನಿರ್ದೇಶನ ನೀಡಿದರು.
ಮೇಕೆದಾಟು ಯೋಜನೆಗೆ ವೇಗಮೇಕೆದಾಟು ಯೋಜನೆಯಿಂದ ಬರಗಾಲದ ಸಂದರ್ಭದಲ್ಲೂ ಎರಡು ರಾಜ್ಯಗಳಿಗೆ ಅನುಕೂಲವಾಗಲಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು 112.88 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಸಮುದ್ರಕ್ಕೆ ಹರಿದುಹೋಗಿದೆ. ಕನಿಷ್ಠ 22 ಟಿಎಂಸಿ ಕುಡಿಯುವ ನೀರು ಸಂಗ್ರಹಿಸುವ ಉದ್ದೇಶದಿಂದ ಮೇಕೆದಾಟು ಯೋಜನೆ ಪ್ರಮುಖವಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ತಮಿಳುನಾಡು ಕೇಳಿದ್ದ ನೀರಿನ ಹರಿವಿನ ಕುರಿತ ಪ್ರಶ್ನೆಗಳಿಗೆ ಎಸ್ಒಪಿ ಕಳುಹಿಸುವ ಮೂಲಕ ಉತ್ತರ ನೀಡಲಾಗಿದೆ. ಕೇಂದ್ರ ಜಲ ಆಯೋಗವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ತಿಳಿಸಿದರು.“ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಎಲ್ಲ ಸಂಸದರ ಸಹಕಾರದೊಂದಿಗೆ ಪ್ರಧಾನಮಂತ್ರಿಗಳಿಗೆ ಮೇಕೆದಾಟು ಯೋಜನೆಯ ಪ್ರಯೋಜನವನ್ನು ಮನವರಿಕೆ ಮಾಡಿಕೊಡಲಾಗುವುದು.
ಮುಳುಗಡೆಯಾಗುವ ಪ್ರದೇಶಕ್ಕೆ ಪರ್ಯಾಯ ಭೂಮಿ ದೊರೆತ ಕೂಡಲೇ ಕಾಮಗಾರಿ ಆರಂಭಿಸಿ, ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ” ಎಂದು ಸಚಿವರು ಹೇಳಿದರು.ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣ ಡಿಜಿಟಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳಿಗೆ ನೀರು ಬಿಡಲು ಸೂಚನೆರಾಜ್ಯದ ಒಟ್ಟು ನೀರಿನಲ್ಲಿ ಶೇ 20ರಷ್ಟನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕು. ತುಮಕೂರು, ಬಸರಾಳು ಹಾಗೂ ನಾಗಮಂಗಲ ಭಾಗದ ಕೆರೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಹರಿಸಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆಯಲ್ಲಿಯೂ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾರಂಗಿ ಹಾಗೂ ಕಬಿನಿ ವ್ಯಾಪ್ತಿಯ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಶ್ರೀರಂಗ ಏತ ನೀರಾವರಿ ಯೋಜನೆಗೆ ಈಗಾಗಲೇ ಖರ್ಚಾಗಿರುವ ಹಣವನ್ನು ಸದ್ಬಳಕೆ ಮಾಡಿಕೊಂಡು ಎಕ್ಸ್ಪ್ರೆಸ್ ಕೆನಾಲ್ ಮೂಲಕ ಶೀಘ್ರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕಾವೇರಿ ನೀರಾವರಿ ನಿಗಮದಲ್ಲಿ ಖಾಲಿ ಇರುವ ಶೇ 57ರಷ್ಟು ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದಾಗಿ ಸಚಿವರು ತಿಳಿಸಿದರು. ಡ್ಯಾಂಗಳ ಪುನಶ್ಚೇತನ ಹಾಗೂ ಅಗತ್ಯ ಕಾಮಗಾರಿಗಳಿಗೆ ಅನುದಾನ ಒದಗಿಸುವ ಸಂಬಂಧ ಆರ್ಥಿಕ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದರು.
ಎಲ್ಲ ನೀರಾವರಿ ನಿಗಮಗಳನ್ನು ಸೇರಿಸಿ ಜಲಸಂಪನ್ಮೂಲ ಸಚಿವರ ನಿಯಂತ್ರಣದಲ್ಲಿ ಕಮಿಷನರೇಟ್ ರಚಿಸುವ ಕುರಿತು ಅಧಿಕಾರಿಗಳ ಅಭಿಪ್ರಾಯಕ್ಕೂ ಸಚಿವರು ಸಮ್ಮತಿ ಸೂಚಿಸಿದರು.
ಕಾವೇರಿ ಜಲಾನಯನ ಪ್ರದೇಶವು 11 ಜಿಲ್ಲೆಗಳಲ್ಲಿ 34,273 ಚದರ ಕಿ.ಮೀ. ವ್ಯಾಪಿಸಿದ್ದು, ನ್ಯಾಯಾಧಿಕರಣದ ತೀರ್ಪಿನಂತೆ 18.85 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗಳ ಅನುಷ್ಠಾನ, ಆಧುನೀಕರಣ ಹಾಗೂ ನಿರ್ವಹಣೆಯಲ್ಲಿ ಯಾವುದೇ ಕಾಮಗಾರಿ ಅಪೂರ್ಣವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ನಿಗಮದ ಹಿರಿಯ ಎಂಜಿನಿಯರ್ಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R