ಪಣತೂರಿನಲ್ಲಿ 45 ಎಕರೆ ವಿಸ್ತೀರ್ಣದ ವೃಕ್ಷೋದ್ಯಾನ ಲೋಕಾರ್ಪಣೆ
ವೃಕ್ಷೋದ್ಯಾನ ಲೋಕಾರ್ಪಣೆ
bengaluru-panathur-45-acre-vrukshodyana-tree-park-inaugurated


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ಪೂರ್ವ ಭಾಗದ ಪಣತೂರಿನಲ್ಲಿ 45 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಿರುವ ಬೃಹತ್ ‘ವೃಕ್ಷೋದ್ಯಾನ’ವನ್ನು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.

ನಗರದಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ನಗರವನ ಯೋಜನೆಯಡಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಸುಮಾರು 145 ಎಕರೆ ಅರಣ್ಯ ಪ್ರದೇಶದ ಪೈಕಿ 45 ಎಕರೆ ಜಾಗದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಕ್ವಾಲ್ಕಾಮ್ ಇಂಡಿಯಾ ಸಂಸ್ಥೆಯ ಸಿಎಸ್ಆರ್ ಅನುದಾನ ಹಾಗೂ ‘ಸೇಟೀಸ್’ ಎನ್ಜಿಒ ಸಹಯೋಗ ಬಳಸಲಾಗಿದೆ. ಉದ್ಯಾನ ಅಭಿವೃದ್ಧಿಗೆ ಸುಮಾರು ₹4.50 ಕೋಟಿ ವೆಚ್ಚವಾಗಿದೆ.

ಹೆಚ್ಚುವರಿಯಾಗಿ ₹1 ಕೋಟಿ ಸಿಎಸ್ಆರ್ ಅನುದಾನ ದೊರೆತಿದ್ದು, ಅದನ್ನು ಉದ್ಯಾನದ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಬಳಸುವಂತೆ ಸಚಿವರು ಸೂಚಿಸಿದ್ದಾರೆ.

ಉದ್ಯಾನದಲ್ಲಿ ಸಾರ್ವಜನಿಕರಿಗಾಗಿ ಸುಮಾರು 2 ಕಿ.ಮೀ. ಉದ್ದದ ಇಕೋ ಟ್ರೇಲ್, ತೆರೆದ ಜಿಮ್, ಮಕ್ಕಳ ಆಟದ ಪ್ರದೇಶ, ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ, ಪರ್ಗೋಲಾ ಹಾಗೂ ಗಜಿಬೋಗಳನ್ನು ನಿರ್ಮಿಸಲಾಗಿದೆ. ವಿವಿಧ ಸಸ್ಯಗಳು, ಪ್ರಾಣಿ–ಪಕ್ಷಿಗಳ ಕುರಿತು ಮಾಹಿತಿ ನೀಡಲು ಕ್ಯೂಆರ್ ಕೋಡ್ ಹೊಂದಿರುವ ನಾಮಫಲಕಗಳನ್ನು ಅಳವಡಿಸಲಾಗಿದೆ.

ಹೇಳಿಕೆ: “45 ಎಕರೆ ಪ್ರದೇಶವು ವಿವಿಧ ಜಾತಿಯ ಮರಗಿಡಗಳು, ಪ್ರಾಣಿ–ಪಕ್ಷಿ ಸಂಕುಲದಿಂದ ಕೂಡಿದೆ. ಉಳಿದ 100 ಎಕರೆ ಪ್ರದೇಶವನ್ನೂ ಕ್ವಾಲ್ಕಾಮ್ ಇಂಡಿಯಾ ಸಂಸ್ಥೆ ಅಭಿವೃದ್ಧಿಪಡಿಸಲು ಮುಂದೆ ಬರಬೇಕು. ಅರಣ್ಯ ಇಲಾಖೆಯಿಂದ ಅಗತ್ಯ ಸಹಕಾರ ಮತ್ತು ಅನುದಾನ ನೀಡಲಾಗುವುದು.

ಬೆಂಗಳೂರಿನಲ್ಲಿ ಇನ್ನೂ ನಾಲ್ಕು ಕಡೆ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯ ಬೃಹತ್ ಉದ್ಯಾನಗಳನ್ನು ನಿರ್ಮಿಸುವ ಯೋಜನೆಯೂ ಇದೆ,” ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ನಗರ ಪ್ರದೇಶದ ಜನರಿಗೆ ಹಸಿರು ವಾತಾವರಣ ಕಲ್ಪಿಸುವುದು, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಒದಗಿಸುವುದು ವೃಕ್ಷೋದ್ಯಾನದ ಪ್ರಮುಖ ಉದ್ದೇಶವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande