ಗಣೇಶೋತ್ಸವ: 1.84 ಲಕ್ಷಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ
ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 1.20 ಲಕ್ಷ ಗಣಪತಿ ವಿಸರ್ಜನೆ; 659 ಸಂಚಾರಿ ಟ್ಯಾಂಕರ್ಗಳ ವ್ಯವಸ್ಥೆ
ಗಣೇಶೋತ್ಸವ: 1.84 ಲಕ್ಷಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದ್ದು, ಉತ್ಸವದ ಮೊದಲ ದಿನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಒಟ್ಟು 1,84,628 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಪರಿಸರ ಸ್ನೇಹಿ ಹಾಗೂ ಸುರಕ್ಷಿತ ವಿಸರ್ಜನೆಗೆ ಜಿಬಿಎ ಕೈಗೊಂಡಿದ್ದ ವ್ಯವಸ್ಥೆಗಳು ಸುಸೂತ್ರವಾಗಿ ಕಾರ್ಯನಿರ್ವಹಿಸಿವೆ.

ಜಿಬಿಎ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 1,20,079 ಗಣೇಶ ಮೂರ್ತಿಗಳು ವಿಸರ್ಜನೆಯಾಗಿವೆ. ಸೆಂಟ್ರಲ್ ವಲಯದಲ್ಲಿ 28,860, ಉತ್ತರ ವಲಯದಲ್ಲಿ 16,857, ದಕ್ಷಿಣ ವಲಯದಲ್ಲಿ 10,372 ಹಾಗೂ ಪೂರ್ವ ವಲಯದಲ್ಲಿ 8,460 ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಜಿಬಿಎ ವ್ಯಾಪ್ತಿಯ 42 ಪ್ರಮುಖ ಕೆರೆಗಳ ಆವರಣದಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಕಲ್ಯಾಣಿಗಳನ್ನು ನಿರ್ಮಿಸಲಾಗಿತ್ತು.

ಜತೆಗೆ, ವಾರ್ಡ್ ಮಟ್ಟದಲ್ಲಿ 659 ಸಂಚಾರಿ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಕೆರೆಗಳ ನೀರು ಕಲುಷಿತಗೊಳ್ಳುವುದನ್ನು ತಡೆಯುವುದರ ಜತೆಗೆ ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ವಿಸರ್ಜನೆಗೆ ಅವಕಾಶ ಕಲ್ಪಿಸಲಾಯಿತು.

122 ಏಕಗವಾಕ್ಷಿ ಕೇಂದ್ರಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳಿಗೆ ಅನುಕೂಲವಾಗುವಂತೆ ಐದೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 122 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿತ್ತು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ನೀಡಲು ಈ ಕೇಂದ್ರಗಳ ಮೂಲಕ ಕ್ರಮ ಕೈಗೊಳ್ಳಲಾಗಿತ್ತು.

ವಿಸರ್ಜನಾ ಸ್ಥಳಗಳು ಹಾಗೂ ಸಂಚಾರಿ ಟ್ಯಾಂಕರ್ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಜಿಬಿಎ ತನ್ನ ಅಧಿಕೃತ ವೆಬ್ಸೈಟ್ನಲ್ಲಿಯೂ ವಿವರಗಳನ್ನು ಪ್ರಕಟಿಸಿತ್ತು.

ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತುಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಜಿಬಿಎ, ಸಾರ್ವಜನಿಕರಲ್ಲಿ ಮಣ್ಣಿನ ಗಣಪತಿ ಬಳಕೆಯ ಕುರಿತು ಜಾಗೃತಿ ಮೂಡಿಸಿತ್ತು. ಜತೆಗೆ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮೂರ್ತಿಗಳ ಮಾರಾಟ ಮತ್ತು ಬಳಕೆಯ ಮೇಲೂ ನಿಗಾ ವಹಿಸಲಾಗಿತ್ತು.

ಜಿಬಿಎ ಅಧಿಕಾರಿಗಳ ಪ್ರಕಾರ, ಕೆರೆಗಳ ನೀರು ಕಲುಷಿತಗೊಳ್ಳದಂತೆ ಮೊಬೈಲ್ ಟ್ಯಾಂಕರ್ಗಳು ಮತ್ತು ಕಲ್ಯಾಣಿಗಳ ಮೂಲಕ ವಿಸರ್ಜನೆಗೆ ವ್ಯವಸ್ಥೆ ಮಾಡಿರುವುದು ಪರಿಣಾಮಕಾರಿಯಾಗಿದೆ.

ಮುಂದಿನ ದಿನಗಳಲ್ಲಿಯೂ ಗಣೇಶ ಮೂರ್ತಿಗಳ ವಿಸರ್ಜನೆ ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಕೂಡ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande