ಮೋದಿ ಜನ್ಮದಿನ: ನಾಳೆಯಿಂದ ಸೇವಾ ಸಂಕಲ್ಪ ಅಭಿಯಾನ ಸಿ.ಟಿ. ರವಿ
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ. ಈ ಕುರಿತು ‘ಎಕ್ಸ್‌’ನಲ್ಲಿ ಹೇಳಿಕೆ ನ
ಸಿ.ಟಿ.ರವಿ ಎಕ್ಸ್ ಪೋಸ್ಟ್


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಹೇಳಿಕೆ ನೀಡಿರುವ ಅವರು, ರಾಷ್ಟ್ರಧರ್ಮವೇ ಪ್ರಥಮ ಎಂಬ ಧ್ಯೇಯದೊಂದಿಗೆ ತ್ಯಾಗ, ಸೇವೆ ಹಾಗೂ ನಿಸ್ವಾರ್ಥ ನಾಯಕತ್ವದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 25 ಪ್ರಭಾವಿ ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಘದಂಗಳದಲ್ಲಿ ಪಕ್ವಗೊಂಡು ‘ಸ್ವದೇಶಿ’ ಹಾಗೂ ‘ಅಂತ್ಯೋದಯ’ ತತ್ತ್ವಗಳನ್ನು ಜೀವನಶಾಸನವನ್ನಾಗಿಸಿಕೊಂಡಿರುವ ಮೋದಿ ಅವರದ್ದು ಕೇವಲ ಅಧಿಕಾರದ ಪಥವಲ್ಲ. ಸ್ವಧರ್ಮ ಹಾಗೂ ಭಾರತ ಮಾತೆಯ ಸೇವೆಗೆ ಮುಡಿಪಾದ ತ್ಯಾಗಮಯ ಪಥವಾಗಿದೆ ಎಂದು ಸಿ.ಟಿ. ರವಿ ಬಣ್ಣಿಸಿದ್ದಾರೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಮೋದಿ ಅವರು ಜಾಗತಿಕ ವೇದಿಕೆಯಲ್ಲಿ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ. ಅವರ ಸೇವಾ ಪಥವು ಪ್ರತಿಯೊಬ್ಬ ರಾಷ್ಟ್ರಭಕ್ತನಿಗೂ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದ್ದಾರೆ.

ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯಲಿರುವ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ‘ನಮೋ ಸೇವಾ ಗಾಥೆ’, ‘ಸೇವಾ ಸೇತು’ ಹಾಗೂ ‘ವಿಕಸಿತ ಭಾರತ ಸಂಕಲ್ಪ’ ಸೇರಿದಂತೆ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಿಸ್ವಾರ್ಥ ಸೇವೆ, ಪರಿಸರ ರಕ್ಷಣೆ ಹಾಗೂ ದೀನ-ದಲಿತರ ಕಲ್ಯಾಣಕ್ಕೆ ಆದ್ಯತೆ ನೀಡುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ರಾಷ್ಟ್ರಪ್ರೇಮಿ ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಯಶಸ್ವಿಗೊಳಿಸಬೇಕು. ಪ್ರತಿಯೊಂದು ಹೆಜ್ಜೆಯೂ ವಿಕಸಿತ ಭಾರತದ ನಿರ್ಮಾಣಕ್ಕೆ ಅರ್ಪಣೆಯಾಗಲಿ ಎಂದು ಸಿ.ಟಿ. ರವಿ ಕರೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande