ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆ: ಡಿಜೆ ಮಾಲೀಕರು, ನಿರ್ವಾಹಕರ ವಿರುದ್ಧ 6 ಪ್ರಕರಣ
ಹುಬ್ಬಳ್ಳಿ, 16 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವದ ಸಂದರ್ಭದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಕೆ ಮಾಡಿದ ಆರೋಪದ ಮೇರೆಗೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಿಜೆ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧ ಒಟ್ಟು 6 ಪ
ಪೋಲಿಸ್ ಇಲಾಖೆ ಬಿಡುಗಡೆ ಮಾಡಿರುವ ಪೋಟೋ


ಹುಬ್ಬಳ್ಳಿ, 16 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವದ ಸಂದರ್ಭದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಕೆ ಮಾಡಿದ ಆರೋಪದ ಮೇರೆಗೆ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಡಿಜೆ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧ ಒಟ್ಟು 6 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೆ.14ರಂದು ಗಣೇಶ ಮೆರವಣಿಗೆ ಸಂದರ್ಭದಲ್ಲಿ ವಿವಿಧೆಡೆ ಡಿಜೆ ಬಳಕೆಯಿಂದ ಹೆಚ್ಚಿನ ಶಬ್ದ ಉಂಟಾಗಿ ಮಹಿಳೆಯರು, ವಯೋವೃದ್ಧರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಆಸ್ಪತ್ರೆಗಳಲ್ಲಿನ ರೋಗಿಗಳು ಹಾಗೂ ಗರ್ಭಿಣಿಯರಿಗೂ ಡಿಜೆ ಶಬ್ದದಿಂದ ತೊಂದರೆಯಾಗುತ್ತಿರುವ ಕುರಿತು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯಿಂದಲೂ ದೂರುಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿ ಡಿಜೆ ಮಾಲೀಕರು ಹಾಗೂ ನಿರ್ವಾಹಕರಿಗೆ ಶಬ್ದದ ಪ್ರಮಾಣ ನಿಯಂತ್ರಿಸುವಂತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸುವಂತೆ ಹಲವು ಬಾರಿ ಎಚ್ಚರಿಕೆ ಹಾಗೂ ಸೂಚನೆ ನೀಡಲಾಗಿತ್ತು. ಆದಾಗ್ಯೂ, ಸೂಚನೆಗಳನ್ನು ಪಾಲಿಸದೆ ನಿಗದಿತ ಮಿತಿಗಿಂತ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಕೆ ಮುಂದುವರಿಸಿದ ಹಿನ್ನೆಲೆಯಲ್ಲಿ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಪ್ರಕರಣಗಳನ್ನು ದಾಖಲಿಸಲಾಗಿದೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಒಂದು, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಒಂದು, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಭಾರತೀಯ ನ್ಯಾಯ ಸಂಹಿತೆಯ ಕಲಂ 125, 292(ಬಿ) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 36, 37, 109ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆರು ಪ್ರಕರಣಗಳ ವಿವರ

ಎಪಿಎಂಸಿ ಪೊಲೀಸ್ ಠಾಣೆ: ಅಮರಗೋಳ ಅಧ್ಯಾಪಕನಗರದಿಂದ ಗಾಮನಗಟ್ಟಿಗೆ ತೆರಳುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ವೇಳೆ ಹೆಚ್ಚಿನ ಶಬ್ದದಲ್ಲಿ ಡಿಜೆ ಧ್ವನಿವರ್ಧಕ ವ್ಯವಸ್ಥೆ ಬಳಸಿದ್ದಲ್ಲದೆ, ಸಾರ್ವಜನಿಕರ ಕಣ್ಣಿಗೆ ತೊಂದರೆಯಾಗುವ ರೀತಿಯಲ್ಲಿ ಕೇಂದ್ರೀಕೃತ ದೀಪಗಳನ್ನು ಬಳಸಿದ ಆರೋಪದ ಮೇಲೆ ಎಸ್‌ಎಸ್ ಡಿಜೆ ಸೌಂಡ್ ಸಿಸ್ಟಂನ ನಿರ್ವಾಹಕ ಪ್ರಶಾಂತ್ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು ಎಂದು ಪೊಲೀಸ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡ ಉಪನಗರ ಪೊಲೀಸ್ ಠಾಣೆ: ಧಾರವಾಡದ ಮರಾಠಾ ಕಾಲನಿ ಗಣಪತಿ ಗುಡಿಯಿಂದ ಶಿವಾಜಿ ವೃತ್ತ, ಸಿಬಿಟಿ, ಜುಬಿಲಿ ವೃತ್ತ ಮೂಲಕ ಪಿಬಿ ರಸ್ತೆಯ ಮಾರ್ಗವಾಗಿ ಕೃಷಿ ಕಾಲೇಜು ಹಾಗೂ ಯತ್ತಿನಗುಡ್ಡದವರೆಗೆ ನಡೆದ ಗಣೇಶ ಮೆರವಣಿಗೆಯಲ್ಲಿ ಹೆಚ್ಚಿನ ಶಬ್ದದಲ್ಲಿ ಡಿಜೆ ಬಳಕೆ ಹಾಗೂ ಸಾರ್ವಜನಿಕರ ಕಣ್ಣಿಗೆ ತೊಂದರೆಯಾಗುವ ರೀತಿಯಲ್ಲಿ ಕೇಂದ್ರೀಕೃತ ದೀಪಗಳ ಬಳಕೆಯ ಹಿನ್ನೆಲೆಯಲ್ಲಿ ಡಿಜೆ ವ್ಯವಸ್ಥೆಯ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾಗಿರಿ ಪೊಲೀಸ್ ಠಾಣೆ: ನವಲೂರು ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಅನುಮತಿ ಪತ್ರದಲ್ಲಿ ಡಿಜೆ ಅಥವಾ ಡಾಲ್ಬಿ ಧ್ವನಿ ವ್ಯವಸ್ಥೆ ಬಳಸಬಾರದು ಎಂಬ ಸ್ಪಷ್ಟ ಷರತ್ತು ವಿಧಿಸಲಾಗಿದ್ದರೂ ಅದನ್ನು ಉಲ್ಲಂಘಿಸಿ ಡಾಲ್ಬಿ ಧ್ವನಿ ವ್ಯವಸ್ಥೆ ಬಳಸಿ ನಿಗದಿತ ಶಬ್ದಮಟ್ಟ ಮೀರಿದ ಆರೋಪದ ಮೇಲೆ ಡಿಜೆ ಮಾಲೀಕರಾದ ನಂದಿನಿ ಹಾಗೂ ನಿರ್ವಾಹಕ ಪ್ರವೀಣ್ ಹವಣೂರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದೇ ಠಾಣೆಯಲ್ಲಿ ಅತ್ತಿಕೊಲ್ಲಾ ಶ್ರೀರಾಮನಗರದಲ್ಲಿ ನಡೆದ ಗಣೇಶ ಮೆರವಣಿಗೆಯಲ್ಲೂ ಅನುಮತಿ ಷರತ್ತು ಉಲ್ಲಂಘಿಸಿ ಡಾಲ್ಬಿ ಧ್ವನಿ ವ್ಯವಸ್ಥೆ ಬಳಸಿ ಹೆಚ್ಚಿನ ಶಬ್ದ ಉಂಟುಮಾಡಿದ ಆರೋಪದ ಮೇಲೆ ಕೊಪ್ಪಳದ ಹನುಮಂತ್ ಈಳಿಗೇರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರು ಡಿಜೆ ಮಾಲೀಕರು ಹಾಗೂ ನಿರ್ವಾಹಕರಾಗಿದ್ದಾರೆ.

ಜಕಣಿಬಾವಿ ಪ್ರದೇಶದಲ್ಲಿ ಗಣೇಶ ಮೆರವಣಿಗೆ ವೇಳೆ ಡಾಲ್ಬಿ ಧ್ವನಿ ವ್ಯವಸ್ಥೆ ಹಾಗೂ ಸಾರ್ವಜನಿಕರ ಕಣ್ಣಿಗೆ ತೊಂದರೆಯಾಗುವ ರೀತಿಯಲ್ಲಿ ಕೇಂದ್ರೀಕೃತ ದೀಪಗಳನ್ನು ಬಳಸಿದ ಆರೋಪದ ಮೇಲೆ ಭದ್ರಾವತಿಯ ಬಿಗ್ ಡ್ಯಾಡಿ ಸೌಂಡ್ ಸಿಸ್ಟಂ ಮಾಲೀಕ ಸುನಿಲ್ ಹಾಗೂ ಡಿಜೆ ನಿರ್ವಾಹಕ ನಿಕೇಶ್ ತಂದೆ ರಮೇಶ್ ಕುಂದುರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸುಭಾಷ್ ರಸ್ತೆಯಲ್ಲಿ ನಡೆದ ಗಣೇಶ ಮೆರವಣಿಗೆಯಲ್ಲಿ ಡಾಲ್ಬಿ ಧ್ವನಿ ವ್ಯವಸ್ಥೆ ಹಾಗೂ ಕೇಂದ್ರೀಕೃತ ದೀಪಗಳನ್ನು ಬಳಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದ ಮೇಲೆ ಸೌಂಡ್ ಸಿಸ್ಟಂ ಮಾಲೀಕ ಪ್ರಸನ್ನ ತಂದೆ ಅಣ್ಣಪ್ಪ ಕಾಂಬಳೆ ಹಾಗೂ ಡಿಜೆ ನಿರ್ವಾಹಕ ಶ್ರೇಯಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande