
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಗರದ ವಿವಿಧ ಪೊಲೀಸ್ ಠಾಣೆಗಳ ಆವರಣ ಹಾಗೂ ಸುತ್ತಮುತ್ತ ಹತ್ತಾರು ವರ್ಷಗಳಿಂದ ಜಪ್ತಿಯಾಗಿ ನಿಂತಿರುವ ವಾಹನಗಳನ್ನು ತೆರವುಗೊಳಿಸಿ, ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಗುರುತಿಸಿ, ಜನರ ದೈನಂದಿನ ಜೀವನಕ್ಕೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಇದರ ಭಾಗವಾಗಿ ಫುಟ್ಪಾತ್ಗಳ ತೆರವು, ಅನಾಥವಾಗಿ ಬಿದ್ದಿರುವ ವಾಹನಗಳ ಟೋಯಿಂಗ್ ಹಾಗೂ ಕಟ್ಟಡ ತ್ಯಾಜ್ಯ (ಡೆಬ್ರಿಸ್) ತೆರವು ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಹತ್ತಾರು ವರ್ಷಗಳಿಂದ ಜಪ್ತಿಯಾಗಿರುವ ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಲಾಗಿದೆ.
ಪೊಲೀಸ್ ಠಾಣೆಗಳ ಬಳಿ ವಾಹನಗಳು ನಿಂತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಶಾಸಕರು ಹಾಗೂ ಸಂಸದರೂ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು ಎಂದು ಸಚಿವರು ತಿಳಿಸಿದರು.
ಈ ಕಾರ್ಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿಂದ ಪೂರ್ವಭಾವಿ ಸಭೆಗಳನ್ನು ನಡೆಸಿದ್ದೇವೆ. ಹಲವು ವಾಹನಗಳು ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿರುವುದರಿಂದ ಅವುಗಳನ್ನು ತಕ್ಷಣ ತೆರವುಗೊಳಿಸಲು ಸಾಧ್ಯವಿಲ್ಲ.
ಪ್ರಕರಣಗಳು ಇತ್ಯರ್ಥವಾಗುವವರೆಗೆ ವಾಹನಗಳನ್ನು ಬೇರೆಡೆ ಸುರಕ್ಷಿತವಾಗಿ ನಿಲುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಪೊಲೀಸ್ ಇಲಾಖೆ ಕಂದಾಯ ಇಲಾಖೆಗೆ ಮನವಿ ಮಾಡಿತ್ತು. ಅದರಂತೆ ಏಳು ಕಡೆಗಳಲ್ಲಿ ಒಟ್ಟು 26 ಎಕರೆ ಜಾಗವನ್ನು ಒದಗಿಸಲಾಗಿದೆ. ಇಂದಿನಿಂದ ವಾಹನಗಳನ್ನು ಹಂತ ಹಂತವಾಗಿ ಈ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರು.
11,346 ವಾಹನಗಳು: ಪೊಲೀಸ್ ಇಲಾಖೆಯ ಸುತ್ತಮುತ್ತ ಒಟ್ಟು 11,346 ಜಪ್ತಿ ವಾಹನಗಳು ನಿಂತಿವೆ. ನ್ಯಾಯಾಲಯದ ಪ್ರಕರಣಗಳ ಕಾರಣ ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಸಾಧ್ಯವಾದಷ್ಟು ವಾಹನಗಳನ್ನು ಸ್ಥಳಾಂತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಜಯನಗರ 4ನೇ ಬ್ಲಾಕ್ನಲ್ಲಿ ಜಪ್ತಿಯಾಗಿ ನಿಂತಿರುವ ವಾಹನಗಳ ಪರಿಸ್ಥಿತಿಯನ್ನು ಉಲ್ಲೇಖಿಸಿದ ಸಚಿವರು, ಇಂತಹ ಸ್ಥಳಗಳು ಗುಜರಿ ವಾತಾವರಣದಿಂದ ಕೂಡಿದ್ದು, ಸಾರ್ವಜನಿಕರಿಗೆ ಅಸಹ್ಯಕರವಾಗಿ ಕಾಣುವುದರ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದರು.
ಇದು ಇವತ್ತಿನ ಸಮಸ್ಯೆಯಲ್ಲ. ಕಳೆದ 15–20 ವರ್ಷಗಳಿಂದ ಪೊಲೀಸ್ ಇಲಾಖೆಗೆ ಎದುರಾಗಿರುವ ಸಮಸ್ಯೆಯಾಗಿದೆ. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
2,024 ವಾಹನಗಳಿಗೆ ನೋಟಿಸ್ನಗರದಲ್ಲಿ ಅನಾಥವಾಗಿ ಬಿದ್ದಿರುವ ವಾಹನಗಳ ಪೈಕಿ 2,024 ವಾಹನಗಳಿಗೆ ಈಗಾಗಲೇ ನೋಟಿಸ್ ಅಂಟಿಸಲಾಗಿದೆ. ಮಾಲೀಕರು ಬಂದು ವಾಹನಗಳನ್ನು ವಾಪಸ್ ತೆಗೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಅವುಗಳನ್ನು ಟೋಯಿಂಗ್ ಮಾಡುವ ಕಾರ್ಯವೂ ನಡೆಯುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಸರ್ಕಾರಿ ಇಲಾಖೆಗಳಲ್ಲಿಯೂ ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವ ವಾಹನಗಳಿವೆ. ಅಂತಹ ವಾಹನಗಳ ಬಗ್ಗೆಯೂ ಗಮನ ಹರಿಸಲಾಗಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಚರ್ಚಿಸಿ ಅವುಗಳ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R