ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜಿಲ್ಲಾಡಳಿತ ಅಸ್ತು: ಹೋರಾಟಗಾರರ ಸಂಭ್ರಮಾಚರಣೆ
ಬಾಗಲಕೋಟೆ, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಬನಹಟ್ಟಿಯಲ್ಲಿ ಪ್ರಜಾ
ಜಯ


ಬಾಗಲಕೋಟೆ, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ ಎಂದು ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ ಎಂಬ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಹೋರಾಟಗಾರರು ಹಾಗೂ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು. ಹೋರಾಟದ ಸ್ಥಳದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು, ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು.

ಬನಹಟ್ಟಿಯಲ್ಲಿ ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಪ್ರಜಾಸೌಧ ನಿರ್ಮಿಸಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟಗಾರರು ನಿರಂತರವಾಗಿ ಧರಣಿ, ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದರು.

ಈ ಕುರಿತು ಮಾತನಾಡಿದ ಹೋರಾಟಗಾರ ರಮೇಶ್ ಹಾದಿಮನಿ, “ಕಳೆದ ಕೆಲ ದಿನಗಳಿಂದ ಪ್ರಜಾಸೌಧ ನಿರ್ಮಾಣಕ್ಕಾಗಿ ನಾವು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಜಿಲ್ಲಾಡಳಿತ ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅಸ್ತು ಎಂದಿರುವುದು ಹೋರಾಟಗಾರರು ಹಾಗೂ ಬನಹಟ್ಟಿ ಜನತೆಯ ಪಾಲಿಗೆ ಸಂತಸದ ವಿಚಾರವಾಗಿದೆ” ಎಂದು ತಿಳಿಸಿದ್ದಾರೆ.

ಪ್ರಜಾಸೌಧ ನಿರ್ಮಾಣದಿಂದ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ದೂರದ ಸ್ಥಳಗಳಿಗೆ ತೆರಳುವ ಅನಿವಾರ್ಯತೆ ಕಡಿಮೆಯಾಗಲಿದೆ. ವಿವಿಧ ಇಲಾಖೆಗಳ ಸೇವೆಗಳು ಒಂದೇ ಸ್ಥಳದಲ್ಲಿ ದೊರೆಯುವುದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಹಣದ ಉಳಿತಾಯವಾಗಲಿದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಹೋರಾಟಕ್ಕೆ ಬೆಂಬಲ ನೀಡಿದ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ರಮೇಶ್ ಹಾದಿಮನಿ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾಡಳಿತ ನೀಡಿರುವ ಭರವಸೆ ಕೇವಲ ಘೋಷಣೆಗೆ ಸೀಮಿತವಾಗದೆ, ಶೀಘ್ರದಲ್ಲೇ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಜಿಲ್ಲಾಡಳಿತದ ನಿರ್ಧಾರದಿಂದ ಹಲವು ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ದೊರೆತಿದ್ದು, ಪ್ರಜಾಸೌಧ ನಿರ್ಮಾಣದ ಮುಂದಿನ ಹಂತದ ಕಾಮಗಾರಿಗಳತ್ತ ಇದೀಗ ಸಾರ್ವಜನಿಕರ ಗಮನ ನೆಟ್ಟಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande