
ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,786 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ರಕ್ಷಣೆ ಹಾಗೂ ಹಬ್ಬದ ಸುಗಮ ಆಚರಣೆಗೆ ವ್ಯಾಪಕ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿ: 4 ಜನ ಡಿಎಸ್ಪಿ, 17 ಜನ ಸಿಪಿಐ/ಪಿಐ, 40 ಜನ ಪಿಎಸ್ಐ, 78 ಜನ ಎಎಸ್ಐ, ಮತ್ತು 470 ಜನ ಹೆಡ್ ಕಾನ್ಸ್ಟೇಬಲ್/ಕಾನ್ಸ್ಟೇಬಲ್.
ಹೆಚ್ಚುವರಿ ಪಡೆ: 500 ಗೃಹರಕ್ಷಕ ಸಿಬ್ಬಂದಿ, 3 ಕೆಎಸ್ಆರ್ಪಿ ಹಾಗೂ 10 ಡಿಎಆರ್ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಣಾವಲು ಇಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಅಥವಾ ಸಮಾಜದ ಶಾಂತಿ ಕದಡುವ ಸಂದೇಶ, ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪನೆ/ಮೆರವಣಿಗೆ ನಿಷೇಧ:
ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ 15-ಗೋನಾಳ್, 10-ಮುದ್ದಾಪುರ ಹಾಗೂ ಕುಡಿತಿನಿ ಪೆÇಲೀಸ್ ಠಾಣಾ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ.
ಸೆಪ್ಟೆಂಬರ್ 14 ರಿಂದ ಗೌರಿ-ಗಣೇಶ ಹಬ್ಬ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಡಿಜೆ, ಹೈ-ಬಾಸ್ ಸೌಂಡ್ ಸಿಸ್ಟಮ್, ಡಿಜೆ ಬಾಕ್ಸ್ ಸೇರಿದಂತೆ ಕರ್ಕಶ ಶಬ್ದ ಉಂಟುಮಾಡುವ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
3ನೇ ಮತ್ತು 5ನೇ ದಿನದಂದು ಜಿಲ್ಲೆಯಾದ್ಯಂತ, 7ನೇ ದಿನದಂದು ಬಳ್ಳಾರಿ ನಗರದಾದ್ಯಂತ, 11ನೇ ದಿನದಂದು ಸಿರುಗುಪ್ಪ ನಗರ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ, 13ನೇ ದಿನದಂದು ಕಂಪ್ಲಿ, ತೆಕ್ಕಲಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಾಗಣೆ ಹಾಗೂ ಮದ್ಯದ ಅಂಗಡಿ/ರೆಸ್ಟೋರೆಂಟ್ಗಳನ್ನು ತೆರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್