
ಬೀದರ್, 15 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬಿಜೆಪಿ ಮುಖಂಡ ಶಶಿ ಹೊಸಳ್ಳಿ ವಿರುದ್ಧ ರೌಡಿ ಶೀಟರ್ ತೆರೆಯುವ ಸಂಬಂಧ ಬೀದರ್ ಉಪವಿಭಾಗದ ಡಿವೈಎಸ್ಪಿ ಹಾಗೂ ಗಾಂಧಿಗಂಜ್ ಪೊಲೀಸರು ಎರಡು ಬಾರಿ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದಾರೆ.
ಶಶಿ ಹೊಸಳ್ಳಿ ಅವರು ವಿವಿಧ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ನೀಡುತ್ತಿರುವ ಹೇಳಿಕೆಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ರೌಡಿ ಶೀಟರ್ ತೆರೆಯುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.
ನೋಟಿಸ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಶಿ ಹೊಸಳ್ಳಿ, ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲದಿರುವಾಗ ರೌಡಿ ಶೀಟರ್ ಹೇಗೆ ತೆರೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ತಮ್ಮ ಯಾವ ಹೇಳಿಕೆಗಳಿಂದ ಸಮಾಜದ ಶಾಂತಿಗೆ ಧಕ್ಕೆ ಉಂಟಾಗಿದೆ ಎಂಬುದನ್ನು ಪೊಲೀಸರು ಪಟ್ಟಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
“ಪ್ರತಿಭಟನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಅಪರಾಧವೇ? ರೌಡಿ ಶೀಟರ್ ತೆರೆಯಲು ಕಾನೂನಿನ ಆಧಾರವೇನು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದಲ್ಲಿ ಬೆಳೆಯುತ್ತಿರುವ ಕಾರ್ಯಕರ್ತರನ್ನು ಹತ್ತಿಕ್ಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಶಶಿ ಹೊಸಳ್ಳಿ, ತಮ್ಮ ಹೇಳಿಕೆಗಳ ಪಟ್ಟಿಯನ್ನು ನೀಡುವಂತೆ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಶೋ-ಕಾಸ್ ನೋಟಿಸ್‌ಗೆ ಕಾನೂನುಬದ್ಧವಾಗಿ ಉತ್ತರ ನೀಡುವುದಾಗಿ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R