
ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಗಣೇಶೋತ್ಸವವು ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಭಕ್ತಿಯ ಸಂಕೇತವಾಗಬೇಕೇ ಹೊರತು ರಾಜಕೀಯ ಸಂಘರ್ಷದ ವೇದಿಕೆಯಾಗಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಹೇಳಿದರು.
ಬಿಜೆಪಿ ನಾಯಕರಾದ ಆರ್. ಅಶೋಕ್, ಪ್ರತಾಪ್ ಸಿಂಹ, ಸಂಸದ ಯದುವೀರ್ ಒಡೆಯರ್ ಸೇರಿದಂತೆ ಕೆಲವರು ನೀಡಿರುವ ಹೇಳಿಕೆಗಳು ಹಾಗೂ ಚಟುವಟಿಕೆಗಳು ಸಮಾಜದಲ್ಲಿ ಅನಗತ್ಯ ಉದ್ವಿಗ್ನತೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಆರೋಪಿಸಿ, ಎಸ್. ಮನೋಹರ್ ನೇತೃತ್ವದ ಕಾಂಗ್ರೆಸ್ ನಿಯೋಗವು ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.
ಈ ವೇಳೆ ಮಾತನಾಡಿದ ಎಸ್. ಮನೋಹರ್, “ಗಣೇಶೋತ್ಸವವು ರಾಜಕೀಯ ಪ್ರಚೋದನೆಯ ವೇದಿಕೆಯಾಗದೆ, ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಹಬ್ಬವಾಗಬೇಕು. ಧರ್ಮ ಮತ್ತು ಭಕ್ತಿಯನ್ನು ರಾಜಕೀಯ ಸಂಘರ್ಷಕ್ಕೆ ಬಳಸಿಕೊಳ್ಳಬಾರದು” ಎಂದು ಹೇಳಿದರು.
“ಯಾರೇ ಕಾನೂನು ಉಲ್ಲಂಘನೆ ಮಾಡಿದ್ದರೂ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದರೂ ಅಥವಾ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು,” ಎಂದು ಅವರು ಆಗ್ರಹಿಸಿದರು.
ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಗಳು ಸಮಾಜವನ್ನು ಒಗ್ಗೂಡಿಸುವ ವೇದಿಕೆಗಳಾಗಬೇಕು. ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡು ಜನರನ್ನು ಪರಸ್ಪರ ಎದುರು ನಿಲ್ಲಿಸುವ ಪ್ರಯತ್ನ ನಡೆಯಬಾರದು ಎಂದು ಅವರು ಹೇಳಿದರು.
“ದೇವರು ಯಾರನ್ನೂ ದ್ವೇಷಿಸಲು ಕಲಿಸುವುದಿಲ್ಲ. ಹಬ್ಬಗಳು ಜನರನ್ನು ಒಗ್ಗೂಡಿಸಬೇಕು, ವಿಭಜಿಸಬಾರದು. ಗಣೇಶೋತ್ಸವದ ಹೆಸರಿನಲ್ಲಿ ಯಾವುದೇ ರೀತಿಯ ಕೋಮು ಪ್ರಚೋದನೆಗೆ ಅವಕಾಶ ನೀಡದೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಜವಾಬ್ದಾರಿ,” ಎಂದು ಮನೋಹರ್ ತಿಳಿಸಿದರು.
ಬಿಜೆಪಿ ನಾಯಕರ ಹೇಳಿಕೆಗಳು ಮತ್ತು ಚಟುವಟಿಕೆಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಿಯೋಗವು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿತು.“ಗಣೇಶೋತ್ಸವ ಭಕ್ತಿಯ ಹಬ್ಬವಾಗಲಿ—ರಾಜಕೀಯ ಸಂಘರ್ಷದ ವೇದಿಕೆಯಾಗದಿರಲಿ,” ಎಂದು ಎಸ್. ಮನೋಹರ್ ಹೇಳಿದರು.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R