ಐತಿಹಾಸಿಕ ಬಿಡಿಎ ಕಟ್ಟಡ ನೆಲಸಮಕ್ಕೆ ನೌಕರರಿಂದ ವಿರೋಧ
ನೌಕರರಿಂದ ವಿರೋಧ
BDA-Historic-Building-Demolition-Government-Plan-Employees-Oppose-Rs-100-Crore-Multi-Storey-Building-Bengaluru


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ಐತಿಹಾಸಿಕ ಕಟ್ಟಡಗಳ ಪೈಕಿ ಒಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಸುಮಾರು ₹100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಿಸಲು ಸರ್ಕಾರ ಮುಂದಾಗಿರುವುದಕ್ಕೆ ಬಿಡಿಎ ನೌಕರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಹಿಂದೆ ಸಿಟಿಐಬಿ ಆಗಿದ್ದ ಸಂಸ್ಥೆ ಹಾಗೂ ನಂತರದ ಬಿಡಿಎ ಮೂಲಕ ಬೆಂಗಳೂರಿನ ಆಡಳಿತಾತ್ಮಕ ಚಟುವಟಿಕೆಗಳು ನಡೆದಿರುವ ಈ ಕಟ್ಟಡಕ್ಕೆ ಸುಮಾರು 80 ವರ್ಷಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಕಟ್ಟಡವನ್ನು ಆಗಾಗ್ಗೆ ದುರಸ್ತಿ ಮಾಡುತ್ತಾ ಬಳಕೆ ಮಾಡಲಾಗುತ್ತಿದೆ.

ಕಳೆದ ವರ್ಷವೂ ಇದೇ ಕಟ್ಟಡದ ದುರಸ್ತಿಗೆ ಸುಮಾರು ₹15 ಕೋಟಿ ವೆಚ್ಚ ಮಾಡಲಾಗಿತ್ತು. ಇದೀಗ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಬಹುಮಹಡಿ ಕಟ್ಟಡ ನಿರ್ಮಿಸುವ ಪ್ರಸ್ತಾವನೆಗೆ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

“ಸುಮಾರು 80 ವರ್ಷಗಳಿಂದ ಆಡಳಿತಾತ್ಮಕ ಕಾರ್ಯಗಳು ನಡೆಯುತ್ತಿರುವ ಈ ಐತಿಹಾಸಿಕ ಕಟ್ಟಡವನ್ನು ನೆಲಸಮಗೊಳಿಸುವುದರಿಂದ ಬೆಂಗಳೂರಿನ ಇತಿಹಾಸದ ಪ್ರಮುಖ ಕುರುಹು ನಶಿಸಲಿದೆ.

ಕಳೆದ ವರ್ಷವೇ ₹15 ಕೋಟಿ ವೆಚ್ಚದಲ್ಲಿ ಕಟ್ಟಡದ ದುರಸ್ತಿ ಮಾಡಲಾಗಿದೆ. ಹೀಗಿರುವಾಗ ಮತ್ತೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು” ಎಂದು ನೌಕರರ ಸಂಘ ಒತ್ತಾಯಿಸಿದೆ.

ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಡಿಎ ನೌಕರರ ಸಂಘದ ವತಿಯಿಂದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಅವರಿಗೆ ಪತ್ರ ಸಲ್ಲಿಸಲಾಗಿದ್ದು, ಪ್ರಸ್ತುತ ಕಟ್ಟಡವನ್ನು ನೆಲಸಮಗೊಳಿಸದೆ ಸಂರಕ್ಷಿಸುವಂತೆ ಮನವಿ ಮಾಡಲಾಗಿದೆ.

ಹೊಸ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಅಂದಾಜು ₹100 ಕೋಟಿ ವೆಚ್ಚವಾಗಲಿದ್ದು, ಹಳೆಯ ಕಟ್ಟಡದ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande