
ಮಂಡ್ಯ, 15 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಹೇಮಾವತಿ ಜಲಾಶಯದಿಂದ ಕನಿಷ್ಠ ಪ್ರಮಾಣದಲ್ಲಿ ನೀರು ಬಿಡಲು ಸೂಚನೆ ನೀಡಲಾಗಿದ್ದು,
ನಾಗಮಂಗಲ, ಮದ್ದೂರು ಹಾಗೂ ಮಳವಳ್ಳಿ ಭಾಗಗಳ ಕೆರೆಗಳನ್ನು ತುಂಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, “ಹೇಮಾವತಿ ಡ್ಯಾಂ ಕೆಆರ್ಎಸ್ಗಿಂತ ದೊಡ್ಡ ಜಲಾಶಯವಾಗಿದ್ದು, ಮೂರು ಜಿಲ್ಲೆಗಳಿಗೆ ನೀರು ಪೂರೈಕೆಯಾಗುತ್ತದೆ. ಸದ್ಯ ಕನಿಷ್ಠ ಪ್ರಮಾಣದಲ್ಲಿ ನೀರು ನೀಡುವಂತೆ ಸೂಚನೆ ಕೊಟ್ಟಿದ್ದೇವೆ. ಮಳೆ ಕೈಕೊಟ್ಟರೆ ಸ್ವಲ್ಪ ಸಮಸ್ಯೆಯಾಗಬಹುದು” ಎಂದರು.
ಸೆಪ್ಟೆಂಬರ್ 20ರಂದು 2ನೇ ಕಟ್ಟು ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಹೆಚ್ಚುವರಿಯಾಗಿ ಮೂರು ದಿನ ನೀರು ಬಿಡುವಂತೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಬೇಕಿತ್ತು.
ಆದರೆ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
“ಇಂದು ಮಧ್ಯಾಹ್ನವೇ ಕಾವೇರಿ ನೀರು ನಿಯಂತ್ರಣ ಸಮಿತಿಗೆ ವಿಶೇಷ ಅರ್ಜಿ ಸಲ್ಲಿಸಲಾಗುವುದು. ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿಯನ್ನು ಸಮಿತಿಗೆ ಮನವರಿಕೆ ಮಾಡಿಕೊಡಲಾಗುವುದು. ಇಂದು ಸಿಡಬ್ಲೂಆರ್ ಸಿ ಹಾಗೂ ಸಿಡಬ್ಲೂಎಂಎ ಸಂಬಂಧಿಸಿದ ಪ್ರಕರಣ ದಾಖಲಾಗಲಿದೆ” ಎಂದು ಸಚಿವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R