
ಬಾಗಲಕೋಟೆ, 28 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನುಲಿಯ ಚಂದಯ್ಯ ಅವರ ಜೀವನ, ಕಾಯಕ ತತ್ವ ಹಾಗೂ ಸಮಾಜಕ್ಕೆ ಅವರು ನೀಡಿದ ಸಂದೇಶವನ್ನು ಸ್ಮರಿಸಲಾಯಿತು.
ಶರಣ ಪರಂಪರೆಯಲ್ಲಿ ಕಾಯಕಕ್ಕೆ ಮಹತ್ವದ ಸ್ಥಾನ ನೀಡಿದ ನುಲಿಯ ಚಂದಯ್ಯ ಅವರು ತಮ್ಮ ಸರಳ ಜೀವನ, ಕಾಯಕನಿಷ್ಠೆ ಹಾಗೂ ಸಾಮಾಜಿಕ ಸಮಾನತೆಯ ಚಿಂತನೆಗಳ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರ ಜೀವನ ಮತ್ತು ವಚನ ಸಂದೇಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶನ ನೀಡುತ್ತವೆ.
ಕಾಯಕವೇ ಕೈಲಾಸ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ದುಡಿಮೆಗೆ ಗೌರವ ನೀಡುವ ಹಾಗೂ ಜಾತಿ, ಧರ್ಮ, ಮೇಲು-ಕೀಳು ಭೇದಗಳನ್ನು ಮೀರಿ ಸಮಾನತೆಯ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನೀಲಕುಮಾರ ದಡ್ಡಿ, ಜಿಲ್ಲಾಧಿಕಾರಿಗಳಾದ ಸಂಗಪ್ಪ, ಉಪವಿಭಾಗಾಧಿಕಾರಿಗಳಾದ ಮಹೇಶ ಮಾಲಗತ್ತಿ, ತಹಶೀಲ್ದಾರರಾದ ವಾಸುದೇವ ಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕೊರಮ ಸಮಾಜದ ಮುಖಂಡರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಜಯಂತಿ ಕಾರ್ಯಕ್ರಮದ ಅಂಗವಾಗಿ ನುಲಿಯ ಚಂದಯ್ಯ ಅವರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕೊಡುಗೆಗಳನ್ನು ಸ್ಮರಿಸಲಾಯಿತು. ಶರಣರ ಆಶಯಗಳು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ನುಲಿಯ ಚಂದಯ್ಯ ಅವರ ಕಾಯಕ ನಿಷ್ಠೆ ಇಂದಿನ ಯುವಜನತೆಗೆ ವಿಶೇಷ ಪ್ರೇರಣೆಯಾಗಿದ್ದು, ಯಾವುದೇ ವೃತ್ತಿಯಾಗಿರಲಿ ಅದನ್ನು ಪ್ರಾಮಾಣಿಕತೆ, ಶ್ರದ್ಧೆ ಹಾಗೂ ನಿಷ್ಠೆಯಿಂದ ನಿರ್ವಹಿಸುವುದು ಸಮಾಜದ ಪ್ರಗತಿಗೆ ಸಹಕಾರಿಯಾಗುತ್ತದೆ. ಶರಣರ ಸಮಾನತೆ, ಸಹಬಾಳ್ವೆ, ದಾಸೋಹ ಹಾಗೂ ಕಾಯಕದ ತತ್ವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಗಣ್ಯರು ಹೇಳಿದರು.
ಕಾರ್ಯಕ್ರಮದಲ್ಲಿ ಕೊರಮ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande