

ಬಳ್ಳಾರಿ, 28 ಆಗಸ್ಟ್ (ಹಿ.ಸ.)
ಆ್ಯಂಕರ್ : `ಆಶಾಲತ' ಸಾಮಾಜಿಕ ನಾಟಕದಲ್ಲಿ ಛಾಯಾಗ್ರಾಹಕನ ಪಾತ್ರ ನಿರ್ವಹಣೆ ಮಾಡುವ ಮೂಲಕ ರಂಗಭೂಮಿ ಮತ್ತು ಫೋಟೋಗ್ರಫಿಯಲ್ಲಿ ಒಟ್ಟೊಟ್ಟಿಗೇ ಬೆಳೆದಿರುವೆ ಎಂದು 2026 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಪುರುಷೋತ್ತಮ ಹಂದ್ಯಾಳು ಅವರು ತಿಳಿಸಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕವು ಪುರುಷೋತ್ತಮ ಹಂದ್ಯಾಳು ಅವರನ್ನು ಪತ್ರಿಕಾ ಭವನದಲ್ಲಿ ಶುಕ್ರವಾರ ಸಲ್ಲಿಸಿದ ಅಭಿನಂದನೆಗಳನ್ನು ಸ್ವೀಕರಿಸಿ, 1991 ರಿಂದಲೂ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುತ್ತಲೇ `ಮಹಾದೇವತಾತ ಕಲಾ ಸಂಘ'ವನ್ನು ಸ್ಥಾಪಿಸಿ ಅನೇಕ ಕಲಾವಿದರ ಜೊತೆಗೂಡಿಕೊಂಡು ಕಲಾಸೇವೆಯನ್ನು ಮುಂದುವರೆಸಿರುವೆ. ನನ್ನ ಬೆಳವಣಿಗೆ - ಸಾಧನೆಯಲ್ಲಿ ರಂಗಭೂಮಿ, ರಂಗ ಕಲಾವಿದರು ಮತ್ತು ಮಾಧ್ಯಮ ಮಿತ್ರರ ಸಹಕಾರ - ಬೆಂಬಲವಿದೆ ಎಂದರು.
ಕಲಾವಿದನಾಗಿ - ಛಾಯಾಗ್ರಾಹಕನಾಗಿ ಮತ್ತು ಸೃಜನಶೀಲ ಕಲೆಯನ್ನು ಅಳವಡಿಸಿಕೊಂಡಿರುವ ನನಗೆ ಸಿಕ್ಕಿರುವ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನಾಡಿನ ಸಮಸ್ತ ಕಲಾವಿದರಿಗೆ ಅರ್ಪಿಸುತ್ತೇನೆ. ನನ್ನನ್ನು ಪ್ರತೀ ಹಂತದಲ್ಲೂ ತಿದ್ದಿ - ತೀಡಿ, ನನ್ನಲ್ಲಿರುವ ಕಲಾವಿದ - ಕಲೆ ಮತ್ತು ಸೃಜನಶೀಲತೆಯನ್ನು ಪಕ್ವಗೊಳಿಸಲು ನೆರವಾದ - ಮಾರ್ಗದರ್ಶನ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್. ವೀರಭದ್ರಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಎಮ್ಮಿಗನೂರಿನ ಜಡೆತಾತಾ ಹಾಸ್ಟಲ್ ಮೂಲಕ ಶಿಸ್ತಿನ ಬದುಕನ್ನು ಅಳವಡಿಸಿಕೊಂಡು, ಹವ್ಯಾಸಿ ಛಾಯಗ್ರಾಹಕರಾಗಿ, ರಂಗಭೂಮಿಯ ಗೀಳಿನ ಮೂಲಕ ಪರಿಪಕ್ವ ಕಲಾವಿದರಾಗಿ ಜನಪ್ರಿಯರಾಗಿರುವ ಪುರುಷೋತ್ತಮ ಹಂದ್ಯಾಳು ಅವರು, ಸಾಮಾಜಿಕ, ಪೌರಾಣಿಕ ಮತ್ತು ವಿಭಿನ್ನ ನಾಟಕಗಳ ಪ್ರಯೋಗಗಳ ಮೂಲಕ ಕಲಾವಿದರ ಮನೆ ಮಾತಾಗಿದ್ದಾರೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್