
ನವದೆಹಲಿ, 23 ಆಗಸ್ಟ್ (ಹಿ.ಸ):
ಆ್ಯಂಕರ್:ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಓಂ ಬಿರ್ಲಾ ಅವರು, ಚಂದ್ರನಿಂದ ಸೂರ್ಯನತ್ತ, ಬಾಹ್ಯಾಕಾಶ ಕೇಂದ್ರದಿಂದ ಹೊಸ ತಂತ್ರಜ್ಞಾನಗಳವರೆಗೆ ಭಾರತದ ಬಾಹ್ಯಾಕಾಶ ಪಯಣವು ಆತ್ಮನಿರ್ಭರತೆ, ನವೋದ್ಯಮ ಮತ್ತು ಹೊಸ ಸಾಮರ್ಥ್ಯದ ಕಥೆಯಾಗಿ ರೂಪುಗೊಂಡಿದೆ ಎಂದು ಹೇಳಿದ್ದಾರೆ. ಬಾಹ್ಯಾಕಾಶ ವಿಜ್ಞಾನಕ್ಕೆ ಕೊಡುಗೆ ನೀಡುತ್ತಿರುವ ವಿಜ್ಞಾನಿಗಳು ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಶುಭಾಶಯ ಕೋರಿದ್ದಾರೆ.
ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದ ಮುಂಚೂಣಿ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಯಶಸ್ವಿಯಾಗುತ್ತಿದೆ. ಈ ಸಾಧನೆ ಯುವಜನರಿಗೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಎತ್ತರಗಳನ್ನು ತಲುಪಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಚಂದ್ರಯಾನ-3ರ ಸಾಧನೆಯು ಭಾರತವನ್ನು ಪ್ರಮುಖ ಬಾಹ್ಯಾಕಾಶ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ. ವಿಜ್ಞಾನಿಗಳ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಗಜೇಂದ್ರ ಸಿಂಗ್ ಶೇಖಾವತ್ ಕೂಡ ರಾಷ್ಟ್ರೀಯ ಬಾಹ್ಯಾಕಾಶ ದಿನದ ಶುಭಾಶಯ ಕೋರಿದ್ದಾರೆ.
ಚಂದ್ರಯಾನ-3ರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಭಾರತದ ವೈಜ್ಞಾನಿಕ ಸಾಮರ್ಥ್ಯ, ತಾಂತ್ರಿಕ ಕೌಶಲ್ಯ ಮತ್ತು ವಿಜ್ಞಾನಿಗಳ ಪರಿಶ್ರಮದ ಪ್ರತೀಕವಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ. ಗಗನಯಾನ ಸೇರಿದಂತೆ ಮುಂದಿನ ಬಾಹ್ಯಾಕಾಶ ಯೋಜನೆಗಳ ಮೂಲಕ ಭಾರತವನ್ನು ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ನಿರಂತರವಾಗಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ‘ವಿಕಸಿತ ಭಾರತ’ದ ಗುರಿಯತ್ತ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.