
ನವದೆಹಲಿ, 22 ಆಗಸ್ಟ್ (ಹಿ.ಸ.):
ಆ್ಯಂಕರ್:ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವ ಕೆಮ್ಮು ಮತ್ತು ಶೀತದ ಔಷಧಿಗಳಲ್ಲಿ ಬಳಸುವ ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಫಿನೈಲ್‌ಫ್ರಿನ್ ಹೈಡ್ರೋಕ್ಲೋರೈಡ್ ಸಂಯೋಜನೆಯ ಎಲ್ಲಾ ನಿಗದಿತ ಪ್ರಮಾಣದ ಸಂಯೋಜಿತ ಔಷಧಿಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಗೆ ಹೊಸ ನಿರ್ಬಂಧ ವಿಧಿಸಿದೆ.
ಶನಿವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಔಷಧಿಗಳ ಲೇಬಲ್, ಪ್ಯಾಕೇಜ್‌ನಲ್ಲಿರುವ ಮಾಹಿತಿ ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಔಷಧ ನೀಡಬಾರದು ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಈ ಹಿಂದೆ 2025ರ ಏಪ್ರಿಲ್ 15ರಂದು ಕೆಲವು ನಿರ್ದಿಷ್ಟ ಸಂಯೋಜಿತ ಔಷಧಿಗಳ ಮೇಲೆ ಇದೇ ರೀತಿಯ ನಿರ್ಬಂಧ ವಿಧಿಸಲಾಗಿತ್ತು. ಇದೀಗ ನಿಯಮದ ವ್ಯಾಪ್ತಿಯನ್ನು ವಿಸ್ತರಿಸಿ, ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಫಿನೈಲ್‌ಫ್ರಿನ್ ಹೈಡ್ರೋಕ್ಲೋರೈಡ್ ಹೊಂದಿರುವ ಎಲ್ಲಾ ಸಂಯೋಜಿತ ಔಷಧಿಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ.
ತಜ್ಞರ ಸಮಿತಿ ಹಾಗೂ ಔಷಧ ತಾಂತ್ರಿಕ ಸಲಹಾ ಮಂಡಳಿಯ ಶಿಫಾರಸಿನ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಈ ಔಷಧಿಗಳ ಬಳಕೆಯಿಂದ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಅವರಿಗೆ ಹೆಚ್ಚು ಸುರಕ್ಷಿತ ಪರ್ಯಾಯಗಳು ಲಭ್ಯವಿವೆ ಎಂದು ಸರ್ಕಾರ ತಿಳಿಸಿದೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940ರ 26ಎ ವಿಧಿಯಡಿ ಈ ಆದೇಶ ಹೊರಡಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.