
ನವದೆಹಲಿ, 22 ಆಗಸ್ಟ್ (ಹಿ.ಸ.):
ಆ್ಯಂಕರ್:‘ವಂದೇ ಮಾತರಂ’ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ರಾಷ್ಟ್ರಭಕ್ತಿಯ ಹೊದಿಕೆ ಹೊದ್ದು ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಂಬಿತ್ ಪಾತ್ರಾ ಮಾತನಾಡಿ, ಆ.19ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯವು 1937ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರವನ್ನು ನೆನಪಿಸುತ್ತದೆ ಎಂದರು.
1937ರಲ್ಲಿ ‘ವಂದೇ ಮಾತರಂ’ನ ಆರು ಪದ್ಯಗಳ ಪೈಕಿ ಎರಡು ಪದ್ಯಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ‘ವಂದೇ ಮಾತರಂ’ನ ಸಂಪೂರ್ಣ ಸ್ವರೂಪದ ಬಗ್ಗೆ ಕಾಂಗ್ರೆಸ್‌ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಆ.15ರಂದು ಕಾಂಗ್ರೆಸ್ ಕಚೇರಿಯಲ್ಲಿ ‘ವಂದೇ ಮಾತರಂ’ ಗಾಯನ ನಡೆದ ಸಂದರ್ಭದ ಘಟನೆಯನ್ನು ಉಲ್ಲೇಖಿಸಿದ ಪಾತ್ರಾ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊದಲ್ಲಿ ಎರಡು ಪದ್ಯಗಳ ಬಳಿಕ ಸೋನಿಯಾ ಗಾಂಧಿ ‘ನಿಲ್ಲಿಸಿ’ ಎಂದು ಹೇಳುತ್ತಿರುವುದು ಕೇಳಿಸುತ್ತದೆ ಎಂದು ಹೇಳಿದರು.
‘ವಂದೇ ಮಾತರಂ’ ಕೇವಲ ಗೀತೆಯಲ್ಲ. ಅದು ಸ್ವಾತಂತ್ರ್ಯ ಹೋರಾಟ, ರಾಷ್ಟ್ರಭಾವನೆ ಮತ್ತು ಭಾರತದ ಹೆಮ್ಮೆಯೊಂದಿಗೆ ಬೆಸೆದುಕೊಂಡಿರುವ ಸಂಕೇತವಾಗಿದೆ. ಗೀತೆಯ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಅದರ ಬಗ್ಗೆ ಗೌರವ ಮತ್ತು ಭಾವನಾತ್ಮಕ ಒಡನಾಟ ವ್ಯಕ್ತವಾಗುತ್ತಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾದ ಬಳಿಕ ನಡೆದ ಮೊದಲ ಪದಾಧಿಕಾರಿಗಳ ಸಭೆಯಲ್ಲಿ ‘ವಂದೇ ಮಾತರಂ’ ಗೌರವಕ್ಕೆ ಸಂಬಂಧಿಸಿದಂತೆ ನಿರ್ಣಯ ಅಂಗೀಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರ್ಕಾರದ ನೇತೃತ್ವದಲ್ಲಿ ಕೆಂಪುಕೋಟೆ ಆವರಣದಲ್ಲಿ ‘ವಂದೇ ಮಾತರಂ’ನ ಎಲ್ಲ ಆರು ಪದ್ಯಗಳನ್ನು ಹಾಡಿರುವುದು ರಾಷ್ಟ್ರಭಾವನೆಗೆ ನೀಡಿದ ಗೌರವದ ಸಂದೇಶವಾಗಿದೆ ಎಂದು ಪಾತ್ರಾ ಹೇಳಿದರು.
ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.